IPL 2024: ಮುಂಬರುವ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈತನೇ ನಾಯಕ; ಸುಳಿವು ನೀಡಿದ ಸೌರವ್ ಗಂಗೂಲಿ
ಭಾರತೀಯ ಕ್ರಿಕೆಟ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸದ್ಯದ ಉತ್ತಮ ಸುದ್ದಿ ಏನೆಂದರೆ, ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ 2024ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಗುರುವಾರ ತಿಳಿಸಿದ್ದಾರೆ.
ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದ ಸಾಲ್ಟ್‌ಲೇಕ್ ಕ್ಯಾಂಪಸ್ ಮೈದಾನದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಪೂರ್ವ ಋತುವಿನ ಅಭ್ಯಾಸ ಶಿಬಿರಕ್ಕೆ ರಿಷಭ್ ಪಂತ್ ಆಗಮಿಸಿದರು.

"ರಿಷಭ್ ಪಂತ್ ಉತ್ತಮ ಸ್ಥಿತಿಯಲ್ಲಿದ್ದಾರೆ. ಮುಂದಿನ ಐಪಿಎಲ್ ಋತುವಿನಿಂದ ಅವರು ಆಡಲಿದ್ದಾರೆ. ಆತ ಈಗ ಅಭ್ಯಾಸ ಮಾಡುವುದಿಲ್ಲ. ಅವರು ನವೆಂಬರ್ 11ರವರೆಗೆ ಇಲ್ಲಿರಲಿದ್ದಾರೆ. ಮುಂಬರುವ ಐಪಿಎಲ್ ಹರಾಜನ್ನು ಪರಿಗಣಿಸಿ ರಿಷಭ್ ಪಂತ್ ತಂಡದ ನಾಯಕರಾಗಿರುವ ಕಾರಣ, ನಾವು ಅವರೊಂದಿಗೆ ತಂಡದ ಬಗ್ಗೆ ಚರ್ಚೆ ನಡೆಸಿದ್ದೇವೆ," ಎಂದು ಸೌರವ್ ಗಂಗೂಲಿ ಕೋಲ್ಕತ್ತಾದಲ್ಲಿ ತಿಳಿಸಿದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಡೆಹ್ರಾಡೂನ್ ಬಳಿ ನಡೆದ ಭೀಕರ ಕಾರು ಅಪಘಾತದ ನಂತರ ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದ್ದಾರೆ. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಮುಂಬರುವ ದಿನಗಳಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪುನರಾಗಮನ ಮಾಡುವ ಭರವಸೆ ಹೊಂದಿದ್ದಾರೆ.

ಕಾರು ಅಪಘಾತದ ನಂತರ ಮೊಣಕಾಲಿನ ಅಸ್ಥಿರಜ್ಜು ಹಾನಿಯಾಗಿತ್ತು. ಬಳಿಕ ಅನೇಕ ಶಸ್ತ್ರಚಿಕಿತ್ಸೆಗೆ ಒಳಗಾದ ಭಾರತ ತಂಡದ ವಿಕೆಟ್ ಕೀಪರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ನಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಕೋಲ್ಕತ್ತಾದಲ್ಲಿ ನಾಲ್ಕು ದಿನಗಳ ಶಿಬಿರದಲ್ಲಿ ಬ್ಯಾಟ್‌ನೊಂದಿಗೆ ಅಭ್ಯಾಸ ಮಾಡುವುದಿಲ್ಲ ಅಥವಾ ಸ್ಟಂಪ್‌ನ ಹಿಂದೆ ಕಾಣಿಸುವುದಿಲ್ಲ. ಆದರೆ ಇದೇ ವರ್ಷ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ 2024ಕ್ಕಾಗಿ ಮಿನಿ ಹರಾಜಿನ ಮೊದಲು ತಂಡದ ಚರ್ಚೆಯ ಭಾಗವಾಗಲಿದ್ದಾರೆ.

"ರಿಷಭ್ ಪಂತ್ ಇಲ್ಲಿ ಅಭ್ಯಾಸ ನಡೆಸುವುದಿಲ್ಲ. ಅಭ್ಯಾಸಕ್ಕೆ ಇಳಿಯಲು ಇನ್ನೂ ಸಮಯವಿದೆ. ಜನವರಿ 2024ರ ವೇಳೆಗೆ, ಅವರು ಇನ್ನಷ್ಟು ಉತ್ತಮಗೊಳ್ಳುತ್ತಾರೆ," ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಹೇಳಿರುವುದಾಗಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
"ನಾವು ತಂಡದ ಬಗ್ಗೆ ಮಾತನಾಡುತ್ತಿದ್ದೇವೆ, ರಿಷಭ್ ನಾಯಕರಾಗಿದ್ದಾರೆ. ಆದ್ದರಿಂದ ಅವರು ಮುಂಬರುವ ಹರಾಜಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿದರು. ಅದಕ್ಕಾಗಿಯೇ ಅವರು ತಂಡಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಅಂತಿಮಗೊಳಿಸಲು ಇಲ್ಲಿಗೆ ಬಂದಿದ್ದಾರೆ,"ಎಂದು ಸೌರವ್ ಗಂಗೂಲಿ ತಿಳಿಸಿದರು.
ಐಪಿಎಲ್ 2023ರ ಋತುವಿನಲ್ಲಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮುನ್ನಡೆಸಿದರು. ಐಪಿಎಲ್ 2021 ಮತ್ತು 2022ರಲ್ಲಿ ಪ್ಲೇಆಫ್ ಪ್ರವೇಶಿಸಿದ ನಂತರ, ಡೆಲ್ಲಿ ಕ್ಯಾಪಿಟಲ್ಸ್ 2023ರಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ 14 ಪಂದ್ಯಗಳಲ್ಲಿ ಕೇವಲ 5 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನವನ್ನು ಗಳಿಸಿತು.
ರಿಷಭ್ ಪಂತ್ ಐಪಿಎಲ್‌ನಲ್ಲಿ ಇದುವರೆಗೆ 98 ಪಂದ್ಯಗಳಲ್ಲಿ ಆಡಿದ್ದಾರೆ ಮತ್ತು 147.97ರ ಸ್ಟ್ರೈಕ್ ರೇಟ್ ಹಾಗೂ 34.61ರ ಸರಾಸರಿಯಲ್ಲಿ 2,838 ರನ್ ಗಳಿಸಿದ್ದಾರೆ. ಇದರಲ್ಲಿ ರಿಷಭ್ ತಮ್ಮ ಹೆಸರಿಗೆ 1 ಶತಕ ಮತ್ತು 15 ಅರ್ಧಶತಕಗಳನ್ನು ಹೊಂದಿದ್ದಾರೆ.
ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತೀಯ ವಿಕೆಟ್ ಕೀಪರ್ ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನವನ್ನು ನಿರೀಕ್ಷಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications