ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿಗೆ 2 ಕಾರಣ ಹೇಳಿದ ಗಂಗೂಲಿ!

ಬರ್ಮಿಂಗ್‌ಹ್ಯಾಮ್, ಜುಲೈ 1: ಐಸಿಸಿ ವಿಶ್ವಕಪ್ 2019ರಲ್ಲಿ ಭಾರತ ಮೊದಲ ಸೋಲು ಕಂಡಿದ್ದರಿಂದ ನಿರಾಶೆ ಅನುಭವಿಸಿದ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿಗೆ ಎರಡು ಪ್ರಮುಖ ಕಾರಣಗಳನ್ನು ನೀಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಭಾನುವಾರ (ಜೂನ್ 30) ನಡೆದ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಇಂಗ್ಲೆಂಡ್ ವಿರುದ್ಧ 31 ರನ್‌ಗಳ ಸೋಲನುಭವಿಸಿತು. ಈ ಹಿಂದೆ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 1 ಪಂದ್ಯ ರದ್ದು ಮಾಡಿಕೊಂಡು ಅಜೇಯ ತಂಡವಾಗಿ ಉಳಿದಿದ್ದ ಭಾರತ, ಈ ಸೋಲಿನೊಂದಿಗೆ ಸೆಮಿಫೈನಲ್ ಖಾತ್ರಿಯನ್ನು ಮುಂದೂಡಿಕೊಂಡಿದೆ.
ಇಂಗ್ಲೆಂಡ್ ನೀಡಿದ್ದ 338 ರನ್ ಗುರಿಯನ್ನು ಭಾರತಕ್ಕೆ ತಲುಪಲು ಸಾಧ್ಯವೇ ಇರಲಿಲ್ಲವೆಂದರಲ್ಲ. ಆದರೆ ಭಾರತ ಸೋತಿದ್ದೆಲ್ಲಿ ಎಂಬುದಕ್ಕೆ ಗಂಗೂಲಿ ಎರಡು ಕಾರಣಗಳನ್ನು ಹೇಳಿಕೊಂಡಿದ್ದಾರೆ.

ಮೊದಲ 10, ಕೊನೆಯ 5 ಓವರ್‌ಗಳು
ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿಗೆ 2 ಹಂತಗಳಲ್ಲಿನ ಆಟದ ಹಿನ್ನಡೆ ಪ್ರಮುಖ ಕಾರಣ ಎಂದು ಗಂಗೂಲಿ ಹೇಳಿದ್ದಾರೆ. ದೊಡ್ಡ ರನ್ ಗುರಿ ಮುಂದಿದ್ದಾಗಲೂ ಮೊದಲ 10 ಓವರ್‌ಗಳಲ್ಲಿ ರೋಹಿತ್ ಶರ್ಮಾ (102), ವಿರಾಟ್ ಕೊಹ್ಲಿ (66) ನಿಧಾನಗತಿಯ ರನ್ ಬಾರಿಸಿದ್ದು ಮತ್ತು ಪ್ರತೀ ಓವರ್‌ಗೆ 13 ರನ್‌ಗಳ ಅವಶ್ಯಕತೆಯಿದ್ದಾಗಲೂ ಕೊನೆಯ 5 ಓವರ್‌ಗಳಲ್ಲಿ ಎಂಎಸ್ ಧೋನಿ ಮತ್ತು ಕೇದಾರ್ ಜಾಧವ್ ಎಸೆತಗಳಿಗೆ ಒಂದೊಂದು ರನ್ ಮೊರೆ ಹೋಗಿದ್ದು ಪರಾಜಯಕ್ಕೆ ಕಾರಣ ಎಂದು ಗಂಗೂಲಿ ಹೇಳಿದ್ದಾರೆ.

ಧೋನಿ-ಜಾಧವ್ ಕೆಟ್ಟ ಬ್ಯಾಟಿಂಗ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ಆರಂಭಿಕ ಬ್ಯಾಟ್ಸ್ಮನ್‌ಗಳಾದ ಜಾನಿ ಬೇರ್ಸ್ಟೋವ್ 111, ಜೇಸನ್ ರಾಯ್ 66, ಬೆನ್ ಸ್ಟೋಕ್ಸ್ 79 ರನ್‌ನೊಂದಿಗೆ 50 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 337 ರನ್ ಬಾರಿಸಿತ್ತು. ಭಾರತ 50 ಓವರ್‌ಗೆ 5 ವಿಕೆಟ್ ಕಳೆದು 306 ರನ್ ಬಾರಿಸಿ ತಲೆ ಬಾಗಿತ್ತು. ಅಂತಿಮ 5 ಓವರ್‌ನಲ್ಲಿ ತಂಡದ ಗೆಲುವು ಧೋನಿ ಮತ್ತು ಜಾಧವ್ ಕೈಯಲ್ಲಿ ಇತ್ತಾದರೂ ಇಬ್ಬರೂ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಸೋಲಿಗೆ ನೆಪವಾದರು. ಅತ್ತ ಬ್ಯಾಟ್ ಬೀಸದೆ ಇತ್ತ ಔಟ್ ಕೂಡ ಆಗದೆ ಭಾರತೀಯ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದರು.

31 ಎಸೆತಗಳಿಗೆ 69 ರನ್
'ಪಂದ್ಯವನ್ನು ಭಾರತ ಕಳೆದುಕೊಂಡಿದ್ದು ಪ್ರಮುಖ ಎರಡು ಘಟ್ಟಗಳಲ್ಲಿ. ಮೊದಲ 10 ಓವರ್ ಮತ್ತು ಕೊನೆಯ 5 ಓವರ್‌ಗಳಲ್ಲಿ' ಎಂದು ಪಂದ್ಯದ ಬಳಿಕ ಟೂರ್ನಿಯ ಅಧಿಕೃತ ಪ್ರಸಾರಕ ಸ್ಟಾರ್ ಸ್ಟೋರ್ಟ್ಸ್ ಜೊತೆ ಮಾತನಾಡುತ್ತ ಗಂಗೂಲಿ ಹೇಳಿದರು. ಹಾರ್ದಿಕ್ ಪಾಂಡ್ಯ (45 ರನ್) 44.5 ಓವರ್‌ನಲ್ಲಿ ಔಟ್ ಆದಾಗ ಭಾರತದ ಖಾತೆಯಲ್ಲಿ 267 ರನ್‌ಗಳಿದ್ದವು. ಅಂದರೆ ಗೆಲುವಿಗೆ 31 ಎಸೆತಗಳಿಗೆ 69 ರನ್‌ಗಳ ಅವಶ್ಯಕತೆಯಿತ್ತು. ಧೋನಿ, ಜಾಧವ್ ಕ್ರೀಸ್‌ನಲ್ಲಿ ಇದ್ದಿದ್ದರಿಂದ ಗೆಲುವಿನ ನಿರೀಕ್ಷೆ ಮೂಡಿಸಿತ್ತು. ಆದರೆ ಕೊನೆ ಓವರ್‌ಗೆ ವೇಳೆ ತಂಡದ ಗೆಲುವಿನಾಸೆ ಮಣ್ಣುಪಾಲಾಗಿತ್ತು. ಇಂಗ್ಲೆಂಡ್ ಮಾತ್ರ ಪಂದ್ಯದ ಗೆಲುವಿನೊಂದಿಗೆ ಸೆಮಿಫೈನಲ್ ಹಾದಿ ಸುಲಭವಾಗಿಸಿಕೊಂಡಿದೆ.

ಕೊಹ್ಲಿ-ರೋಹಿತ್ ಸಮಸ್ಯೆ ಎಳೆದುಕೊಂಡರು
'338 ರನ್ ಗುರಿಯಿದ್ದಾಗ ನೀವು ಮೊದಲ ಪವರ್‌ಪ್ಲೇ ವೇಳೆ ಕೇವಲ 28 ರನ್ ಗಳಿಸೋದು ಒಳ್ಳೆಯ ಲಕ್ಷಣವಲ್ಲ. ಟಾಪ್ ಆರ್ಡರ್ ನಲ್ಲಿದ್ದರೂ ಕೊಹ್ಲಿ ಮತ್ತು ರೋಹಿತ್ ಬ್ಯಾಟಿಂಗ್‌ಗಾಗಿ ಹೆಣಗಾಡಿದರು, ಸಮಸ್ಯೆ ಎಳೆದುಕೊಂಡರು' ಎಂದು ಗಂಗೂಲಿ ಸೋಲಿನ ವಿಶ್ಲೇಷಣೆ ಮಾಡಿದ್ದಾರೆ. ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ 2.3ನೇ ಓವರ್‌ಗೆ ಡಕ್ ಔಟ್ ಆದ ಬಳಿಕ ರೋಹಿತ್-ಕೊಹ್ಲಿ ಜೊತೆಯಾಟ ಆಡಿದ್ದರಾದರೂ ಭಾರತ 10 ಓವರ್ ವೇಳೆ ಕೇವಲ 28 ರನ್ ಕಲೆ ಹಾಕಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications