ಪ್ರಸಕ್ತ ಐಪಿಎಲ್‌ನಲ್ಲಿ ಹಲವು ಯುವ ಆಟಗಾರರು ಸದ್ದು ಮಾಡಿದ್ದಾರೆ. ಈ ವೇಳೆ ಎದ್ದು ಕಾಣುವ ಒಬ್ಬ ಬ್ಯಾಟರ್ ಎಂದರೆ ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ. ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಜಯದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಇವರು ಟೈಟನ್ಸ್ ವಿರುದ್ಧ ಆಡಿದ ಧಾಟಿಯನ್ನು ಹಲವು ಆಟಗಾರರು ಬೆನ್ನುತಟ್ಟಿದ್ದರು. ಈಗ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಸಹ ಅವರಿಗೆ ಸಲಹೆ ನೀಡಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ದೊಡ್ಡ ಇನಿಂಗ್ಸ್ ಕಟ್ಟದೇ ನಿರಾಸೆ ಅನುಭವಿಸಿದರು. ಆದರೆ ಇವರಿಗೆ ಸೂಕ್ತ ಸಲಹೆಯನ್ನು ದಾದಾ ನೀಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ತನ್ನ ನಿರ್ಭೀತ ಶೈಲಿಗೆ ಅಂಟಿಕೊಳ್ಳುವಂತೆ ವೈಭವ್ ಸೂರ್ಯವಂಶಿ ಅವರಿಗೆ ಸಲಹೆ ನೀಡಿದ್ದಾರೆ.

ಇಂಡಿಯಾ ಟುಡೆ ಮಾಡಿರುವ ವರದಿಯಂತೆ ಗಂಗೂಲಿ, ವೈಭವ್‌ಗೆ ಕಿವಿಮಾತು ನೀಡಿದ್ದಾರೆ. "ನಾನು ನಿಮ್ಮ ಆಟವನ್ನು ಗಮನಿಸಿದ್ದೇನೆ. ನೀವು ಭಯವಿಲ್ಲದೇ ಆಡುತ್ತೀದ್ದೀರಿ. ನಿಮ್ಮ ಆಟ ಹೀಗೇ ಇರಲಿ. ಇದನ್ನು ಬದಲಾಯಿಸುವ ಅವಶ್ಯಕತೆ ಇಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ. ವೈಭವ್‌ಗೆ ಉತ್ತಮ ಶಕ್ತಿ ಇದೆ. ಅವರು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರನ್ ಗಳಿಸದೇ ಇದ್ದರೂ ಸಹ ತುಂಬಾ ಒಳ್ಳೆಯ ಆಟಗಾರ ಎಂದು ಗಂಗೂಲಿ ಬೆನ್ನು ತಟ್ಟಿದ್ದಾರೆ. ವೈಭವ್ ಸುರ್ಯವಂಶಿಯ ಭಾರವಾದ ಬ್ಯಾಟ್ ಕಂಡ ದಾದಾ, ಯುವ ಆಟಗಾರ ಪವರ್ ಹಿಂಟಿಗ್ ಸಾಮರ್ಥ್ಯವನ್ನು ಮೆಚ್ಚಿಕೊಂಡರು.
ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಮೋಘ ಪ್ರದರ್ಶನ ನೀಡಿ ಹಲವು ದಾಖಲೆ ಬರೆದರು. ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಸೂರ್ಯವಂಶಿ ಅವರದ್ದಾಯಿತು. ಅಲ್ಲದೆ ಭಾರತದ ಪರ ವೇಗವಾಗಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರಿಗಿಂತಲೂ ಮೊದಲು ವೇಗವಾಗಿ ಶತಕ ಬಾರಿಸಿದ ಹಿರಿಮೆ ಕ್ರಿಸ್ ಗೇಲ್ ಹೆಸರಿನಲ್ಲಿದೆ.

ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ಮೆಗಾ ಹರಾಜಿನಲ್ಲಿ 1.1 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಇವರು 12 ನೇ ವಯಸ್ಸಿನಲ್ಲಿ ಬಿಹಾರ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದಾರೆ. ವೈಭವ್ ಸೂರ್ಯವಂಶಿ ತಮ್ಮ ಸಿಕ್ಸರ್ ಬಾರಿಸುವ ಎಬಿಲಿಟಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇವರಿಗೆ ರಾಜಸ್ಥಾನ ಆರಂಭಿಕ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ನೀಡಲಿಲ್ಲ. ಆದರೆ ಕೊನೆಗೆ ಇವರಿಗೆ ಅವಕಾಶ ಸಿಕ್ಕಿತು. ಇವರ ಬ್ಯಾಟಿಂಗ್ ಧಾಟಿಯನ್ನು ಕಂಡಾಗ ದಿಗ್ಗಜ ಆಟಗಾರರ ಬ್ಯಾಟಿಂಗ್ ಶೈಲಿ ನೆನಪಾಗುತ್ತದೆ. ಮುಂದಿನ ದಿನಗಳಲ್ಲಿ ವೈಭವ್ ಮತ್ತಷ್ಟು ಬಿಗ್ ಇನಿಂಗ್ಸ್ ಕಟ್ಟಿ ತಂಡದ ಜಯದಲ್ಲಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.