ನಾವು ನೋಡಿಕೊಳ್ಳುತ್ತೇವೆ ಬಿಡಿ ಎಂದು ಕೊಹ್ಲಿ ಹೇಳಿಕೆಗಳ ಬಗ್ಗೆ ಮೌನಮುರಿದ ಗಂಗೂಲಿ!

ಬಿಸಿಸಿಐ ಮತ್ತು ಟೀಮ್ ಇಂಡಿಯಾ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಆಟಗಾರರು ಒಂದು ರೀತಿಯ ಹೇಳಿಕೆ ನೀಡಿದರೆ ಬಿಸಿಸಿಐ ಮತ್ತೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದೆ. ಬಿಸಿಸಿಐ ನಾವು ಆಟಗಾರರ ಜೊತೆ ಸಂಪರ್ಕದಲ್ಲಿದ್ದೇವೆ ಏನೇ ಮಾಡಬೇಕೆಂದರೂ ಅವರಿಗೆ ತಿಳಿಸಿಯೇ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿಕೆಗಳನ್ನು ನೀಡಿದರೆ, ಆಟಗಾರರು ಮಾತ್ರ ಬಿಸಿಸಿಐನಿಂದ ಯಾವುದೇ ರೀತಿಯ ಮಾಹಿತಿ ಬಂದಿರಲಿಲ್ಲ ಮತ್ತು ಅವರು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮುಂಚೆಯೇ ನಮಗೆ ತಿಳಿಸಿರಲಿಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಹೌದು, ಬಿಸಿಸಿಐ ಮತ್ತು ಆಟಗಾರರ ನಡುವೆ ದೊಡ್ಡ ಮಟ್ಟದ ಅಂತರವಿದೆ ಹಾಗೂ ಸರಿಯಾದ ಸಂಪರ್ಕ ಮತ್ತು ಸಂಬಂಧವಿಲ್ಲ ಎಂಬ ಆರೋಪಗಳು ಆಗಿಂದಾಗ್ಗೆ ಕೇಳಿಬರುತ್ತಲೇ ಇವೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ನಡೆಯುತ್ತಿರುವ ಸದ್ಯದ ವಿವಾದ. ಹೌದು, ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ ಭಾರತ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಿದ್ದೇವೆ ಎಂಬ ಘೋಷಣೆಯನ್ನು ಕೂಡ ಮಾಡಿತು. ಹೀಗೆ ಏಕಾಏಕಿ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಯಾಕೆ ತೆಗೆದುಹಾಕಲಾಯಿತು ಎಂಬ ಕಾರಣವನ್ನೂ ತಿಳಿಸದ ಬಿಸಿಸಿಐ ಭಾರೀ ಟೀಕೆಗಳಿಗೆ ಒಳಗಾಯಿತು. ಹೀಗೆ ಟೀಕೆಗಳನ್ನು ಎದುರಿಸಿದ ನಂತರ ವೈಟ್ ಬಾಲ್ ಕ್ರಿಕೆಟ್ ಮಾದರಿಗಳಿಗೆ ಓರ್ವನೇ ನಾಯಕನಿರಬೇಕು ಎಂಬ ಕಾರಣಕ್ಕೆ ಈ ನಿರ್ಧಾರವನ್ನು ತೆಗೆದುಕೊಂಡೆವು ಎಂದು ಬಿಸಿಸಿಐ ಸ್ಪಷ್ಟನೆ ನೀಡಿತು.
ಈ ಕುರಿತಾಗಿ ಮಾತನಾಡಿದ್ದ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗೊಂಡಾಗ ಬಿಸಿಸಿಐ ವಿರೋಧವನ್ನು ವ್ಯಕ್ತಪಡಿಸಿತ್ತು ಆದರೂ ಸಹ ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದರು ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ ಸದ್ಯ ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತಾಗಿ ಮಾತನಾಡಿದ್ದು ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಬಿಸಿಸಿಐಗೆ ಮಾಹಿತಿ ನೀಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಬದಲಾಗಿ ಬಿಸಿಸಿಐ ತನ್ನ ಮನವಿಯನ್ನು ಸ್ವೀಕರಿಸಿತು ಎಂದು ಸ್ಪಷ್ಟನೆಯನ್ನು ನೀಡಿದರು. ಈ ರೀತಿ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಸೌರವ್ ಗಂಗೂಲಿ ನೀಡಿದ್ದ ಹೇಳಿಕೆ ಸುಳ್ಳು ಎಂದು ಸಾಮಾಜಿಕ ಜಾಲತಾಣದ ತುಂಬಾ ಗಂಗೂಲಿ ವಿರುದ್ಧ ಸಾಲು ಸಾಲು ಟೀಕೆಗಳು ವ್ಯಕ್ತವಾಗತೊಡಗಿದವು.
ಹಾಗೂ ಸೌರವ್ ಗಂಗೂಲಿ ಮುಂದೆ ಬಂದು ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಗಳಿಗೆ ಉತ್ತರಗಳನ್ನು ನೀಡಬೇಕು. ಅಂದು ವಿರಾಟ್ ಕೊಹ್ಲಿಗೆ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಬೇಡಿ ಎಂದು ಬಿಸಿಸಿಐ ಹೇಳಿತ್ತು ಎಂದು ಸುಳ್ಳು ಹೇಳಿಕೆ ನೀಡಿದ್ರಾ ಅಥವಾ ಅಂದು ನಿಜಕ್ಕೂ ನಡೆದದ್ದೇನು ಎಂಬುದನ್ನು ಸ್ವತಃ ಸೌರವ್ ಗಂಗೂಲಿ ಅವರೇ ತಿಳಿಸಬೇಕು ಎಂದು ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸದ್ಯ ಸೌರವ್ ಗಂಗೂಲಿ ಮಾಧ್ಯಮದ ಮುಂದೆ ಪ್ರತ್ಯಕ್ಷವಾಗಿದ್ದು ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿ ನಡೆಸಿ ಹಂಚಿಕೊಂಡ ವಿಷಯಗಳ ಕುರಿತು ಪತ್ರಕರ್ತರು ಪ್ರಶ್ನೆಗಳನ್ನು ಕೇಳಿದಾಗ ಈ ಕೆಳಕಂಡಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಕೊಹ್ಲಿ ಕುರಿತಾದ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರಿಸಿ ಸುಮ್ಮನಾದ ಗಂಗೂಲಿ
ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿಯಲ್ಲಿ ತಾನು ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಮಾಹಿತಿಯನ್ನು ನೀಡಿದಾಗ ಬಿಸಿಸಿಐ ಯಾವುದೇ ವಿರೋಧವನ್ನು ವ್ಯಕ್ತ ಪಡಿಸದೇ ತನ್ನ ನಿರ್ಧಾರವನ್ನು ಸ್ವಾಗತಿಸಿತು ಎಂದು ಸ್ಪಷ್ಟನೆಯನ್ನು ನೀಡಿದರು. ಆದರೆ ನೀವು ಈ ಹಿಂದೆ ವಿರಾಟ್ ಕೊಹ್ಲಿಗೆ ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಬಿಸಿಸಿಐ ಮನವಿ ಮಾಡಿತ್ತು ಎಂಬ ಹೇಳಿಕೆಯನ್ನು ನೀಡಿದ್ರಿ. ಹೀಗಾಗಿ ವಿರಾಟ್ ಕೊಹ್ಲಿ ಅವರ ಈ ಹೇಳಿಕೆ ಕುರಿತು ಸದ್ಯ ನಿಮ್ಮ ಉತ್ತರವೇನು ಎಂದು ಮಾಧ್ಯಮದವರು ಗಂಗೂಲಿಗೆ ಪ್ರಶ್ನೆ ಹಾಕಿದಾಗ ಒಂದೇ ವಾಕ್ಯದಲ್ಲಿ ಉತ್ತರಿಸಿದ ಸೌರವ್ ಗಂಗೂಲಿ "ಹೇಳುವುದಕ್ಕೆ ಏನೂ ಇಲ್ಲ, ನಾವು ಅದನ್ನು ನಿಭಾಯಿಸುತ್ತೇವೆ. ಅದೆಲ್ಲವನ್ನೂ ಬಿಸಿಸಿಐಗೆ ಬಿಟ್ಟುಬಿಡಿ" ಎಂದು ಹೇಳಿಕೆಯನ್ನು ನೀಡಿ ಸ್ಪಷ್ಟನೆ ನೀಡದೇ ಸುಮ್ಮನಾಗಿದ್ದಾರೆ.

ಕೊಹ್ಲಿ ಹೇಳಿದ್ದೇ ನಿಜನಾ?
ಸದ್ಯ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡದೆಯೇ ಸುಮ್ಮನಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸೌರವ್ ಗಂಗೂಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸುಮ್ಮನಾಗಿರುವುದನ್ನು ನೋಡಿದರೆ ವಿರಾಟ್ ಕೊಹ್ಲಿ ಹೇಳಿದ ಮಾತುಗಳೇ ಸತ್ಯ ಎನಿಸುತ್ತದೆ ಎಂದು ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಗಂಗೂಲಿ ವಿರುದ್ಧ ಕಿಡಿಕಾರಿದ ನೆಟ್ಟಿಗರು
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸೌರವ್ ಗಂಗೂಲಿ ವಿರುದ್ಧ ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗುತ್ತಿವೆ. ಸೌರವ್ ಗಂಗೂಲಿ ಹೊಲಸು ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ದೊಡ್ಡ ಆರೋಪವನ್ನು ಮಾಡುತ್ತಿರುವ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಸೌರವ್ ಗಂಗೂಲಿ ಅವರಿಗೆ ನಾಚಿಕೆಯಾಗಬೇಕು ಎಂದು ಟ್ವಿಟ್ಟರ್ ಟ್ರೆಂಡ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications