
ಕೋಲ್ಕತ್ತಾ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಆರೋಗ್ಯದ ಕುರಿತು ಮುಂದಿನ 24 ಗಂಟೆಗಳ ಕಾಲ ನಿಗಾವಹಿಸುತ್ತೇವೆ. ಆ್ಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ ಬಳಿಕ ಗಂಗೂಲಿ ಸಂಪೂರ್ಣ ಪ್ರಜ್ಞಾ ಸ್ಥಿತಿಗೆ ಬಂದಿದ್ದಾರೆ ಎಂದು ಕೋಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಯ ವೈದ್ಯ ಡಾ. ಅಫ್ತಾಬ್ ಖಾನ್ ಹೇಳಿದ್ದಾರೆ.
ಸೌರವ್ ಗಂಗೂಲಿಯವರಿಗೆ ಆ್ಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಿದ್ದೇವೆ. ಅವರು ಈಗ ಸಂಪೂರ್ಣ ಸ್ಥಿರವಾಗಿದ್ದಾರೆ. ಅವರನ್ನು ಮುಂದಿನ 24 ಗಂಟೆಗಳ ಕಾಲ ಉಪಚರಿಸಲಿದ್ದೇವೆ. ಅವರೀಗ ಸಂಪೂರ್ಣ ಪ್ರಜ್ಞಾ ಸ್ಥಿತಿಗೆ ಬಂದಿದ್ದಾರೆ. ಮಾತನಾಡುತ್ತಿದ್ದಾರೆ,' ಎಂದು ಡಾ. ಅಫ್ತಾಬ್ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.
'ಗಂಗೂಲಿಯನ್ನು ಉಪಚರಿಸುವಾಗ ಅವರ ಹೃದಯದಲ್ಲಿ ಎರಡು ನಾಳಗಳಲ್ಲಿ ತಡೆಯಾಗಿದ್ದು ಕಂಡುಬಂತು. ಈಗ ಸೌರವ್ ಸಂಪೂರ್ಣವಾಗಿ ಸ್ಥಿರವಾಗಿರುವುದರಿಂದ ಸೋಮವಾರ (ಜನವರಿ 4) ನಾವೊಂದು ಸಭೆ ನಡೆಸುತ್ತೇವೆ. ಆ ಬಳಿಕ ಮುಂದೇನು ಅಂತ ನಿರ್ಧರಿಸುತ್ತೇವೆ. ಗಂಗೂಲಿ ಸಂಪೂರ್ಣ ಚೇತರಿಕೆಗೆ ನಮ್ಮ ಆದ್ಯತೆ,' ಎಂದು ಅಫ್ತಾಬ್ ತಿಳಿಸಿದ್ದಾರೆ.
ಶನಿವಾರ ಮುಂಜಾನೆ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಗಂಗೂಲಿಗೆ ಹೃದಯಬೇನೆ ಕಾಣಿಸಿಕೊಂಡಿತು. ಗಂಗೂಲಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಎಡಗೈ ಬ್ಯಾಟ್ಸ್‌ಮನ್ ಆಗಿದ್ದ ದಾದಾ, ಭಾರತ ತಂಡದ ಪರ 113 ಟೆಸ್ಟ್ ಪಂದ್ಯಗಳಲ್ಲಿ 42.18ರ ಸರಾಸರಿಯಲ್ಲಿ 7212 ರನ್, 311 ಏಕದಿನ ಪಂದ್ಯಗಳಲ್ಲಿ 40.73ರ ಸರಾಸರಿಯಂತೆ 11363 ರನ್ ಗಳಿಸಿದ್ದಾರೆ.