ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ತಂಡದಲ್ಲಿ ಯುವ ಆಟಗಾರ ಸರ್ಫರಾಜ್ ಖಾನ್ ಅವರನ್ನು ಮತ್ತೊಮ್ಮೆ ನಿರ್ಲಕ್ಷಿಸಲಾಗಿದ್ದು ಇದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಪದೇ ಪದೇ ನಿರ್ಲಕ್ಷ್ಯ ಮಾಡುತ್ತಿರುವ ವಿಚಾರವಾಗಿ ಅನೇಕ ಅಭಿಪ್ರಾಯಗಳು ವ್ಯಕ್ತವಾಗಿದ್ದು ಇದೀಗ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಯುವ ಆಟಗಾರ ಸರ್ಫರಾಜ್ ಖಾನ್‌ಗೆ ಭಾರತೀಯ ತಂಡದಲ್ಲಿ ಅವಕಾಶ ದೊರೆಯದ ಬಗ್ಗೆ ಸೌರವ್ ಗಂಗೂಲಿ ಬೇಸರ ವ್ಯಕ್ತಪಡಿಸಿದ್ದು ಆತನ ಬೆಂಬಲಕ್ಕೆ ನಿಂತಿದ್ದಾರೆ. ಭಾರತೀಯ ತಂಡದಲ್ಲಿ ಸರ್ಫರಾಜ್‌ಗೆ ಅವಕಾಶ ದೊರೆಯಬೇಕು ಎಂದಿರುವ ಸೌರವ್ ಗಂಗೂಲಿ ವೆಸ್ಟ್ ಇಂಡಿಸ್ ಪ್ರವಾಸದಲ್ಲಿ ಅವಕಾಶ ದೊರೆಯದಿರುವುದಕ್ಕೆ ಬೇಸರ ಮೂಡಿಸಿದೆ ಎಂದಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಸರ್ಫರಾಜ್ ಖಾನ್ ಶಾರ್ಟ್ ಎಸೆತಗಳನ್ನು ಎದುರಿಸಲು ತಿಣಯಕಾಡುತ್ತಾರೆ ಎಂಬ ಅಭಿಪ್ರಾಯವನ್ನು ಗಂಗೂಲಿ ತಿರಸ್ಕರಿಸಿದ್ದು ಆತನಲ್ಲಿ ಅಂಥಾ ಕೊರೆತೆಯಿರುವುದನ್ನು ಕಂಡಿಲ್ಲ ಎಂದಿದ್ದಾರೆ.

ಜುಲೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 16 ಸದಸ್ಯರ ಟೀಮ್ಇಂಡಿಯಾ ಸ್ಕ್ವಾಡ್ ಪ್ರಕಟಿಸಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಸ್‌ಶಿಪ್‌ನ ಹೊಸ ಆವೃತ್ತಿಯ ಆರಂಭಿಕ ಹಂತದಲ್ಲಿ ಕೆಲ ಹೊಸ ಆಟಗಾರರಿಗೆ ಅವಕಾಶವನ್ನು ನೀಡಲಾಗುತ್ತದೆ ಎಂಬ ನಿರೀಕ್ಷೆಯಿತ್ತು. ಈ ತಂಡದಲ್ಲಿ ಯಶಸ್ಸವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್‌ಗೆ ಅವಕಾಶ ದೊರೆತಿದೆಯಾದರೂ ಸರ್ಫರಾಜ್ ಖಾನ್ ಹಾಗೂ ಅಭಿಮನ್ಯು ಈಶ್ವರನ್‌ಗೆ ಅವಕಾಶ ದೊರೆಯದಿರುವುದು ಅಚ್ಚರಿ ಮೂಡಿಸಿದೆ. ಈ ಇಬ್ಬರು ಕೂಡ ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ.
ಸರ್ಫರಾಜ್ ಖಾನ್ ಐಪಿಎಲ್ 2023 ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರು. 4 ಪಂದ್ಯಗಳಲ್ಲಿ ಅವಕಾಶ ಪಡೆದ ಸರ್ಫರಾಜ್ ಖಾನ್ ಕೇವಲ 53 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಮುಂಬೈ ಮೂಲದ ಈ ಬ್ಯಾಟರ್ ಕಳೆದ ಮೂರು ರಣಜಿ ಋತುಗಳಲ್ಲಿ ಅತ್ಯಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು 2566 ರನ್ ಗಳಿಸಿದರು. 2019/20 ಋತುವಿನಲ್ಲಿ 928 ರನ್ ಗಳಿಸಿದ ಸರ್ಫರಾಜ್ 2022-23ರ ಆವೃತ್ತಿಯಲ್ಲಿ 982 ಮತ್ತು 2022-23 ಋತುವಿನಲ್ಲಿ 656 ರನ್ ಗಳಿಸಿದ್ದಾರೆ.
"ನನ್ನ ಪ್ರಕಾರ ಯಶಸ್ವಿ ಜೈಸ್ವಾಲ್ ರಣಜಿ ಟ್ರೋಫಿ, ಇರಾನಿ ಟ್ರೋಫಿ, ದುಲೀಪ್ ಟ್ರೋಫಿಯಲ್ಲಿ ಭಾಈ ಪ್ರಮಾಣದಲ್ಲಿ ರನ್‌ಗಳಿಸಿದ್ದಾರೆ. ಹಾಗಾಗಿಯೇ ಅವರಿಗೆ ತಂಡದಲ್ಲಿ ಅವಕಾಶ ದಪರೆತಿದೆ ಎಂದು ನಾನು ಭಾವಿಸುತ್ತೇನೆ. ಸರ್ಫರಾಜ್ ಖಾನ್ ಬಗ್ಗೆ ನನಗೆ ಈ ಸಂದರ್ಭದಲ್ಲಿ ಬೇಸರವಾಗುತ್ತದೆ. ಇಷ್ಟು ಪ್ರಮಾಣದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅವರು ರನ್‌ಗಳಿಸಿರುವ ಕಾರಣಕ್ಕೆ ಅವರೊಗೆ ಅವಕಾಶ ದೊರೆಯಲೇಬೇಕಿದೆ" ಎಂದಿದ್ದಾರೆ ಸೌರವ್ ಗಂಗೂಲಿ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕನಾಗಿರುವ ಸೌರವ್ ಗಂಗೂಲಿ ಕಳೆದ ಐಪಿಎಲ್ ಸಂದರ್ಭದಲ್ಲಿ ಸರ್ಫರಾಜ್ ಅವರೊಂದಿಗೆ ಕರ್ತವ್ಉ ನಿರ್ವಹಿಸಿದ್ದಾರೆ. ಇದೀಯ ಸರ್ಫರಾಜ್ ಅವರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ಬೇಕು ಎಂದಿರುವ ಗಂಗೂಲಿ ದೇಶೀಯ ಟೂರ್ನಿಯಲ್ಲಿ ದೌರ್ಬಲ್ಯಗಳನ್ನು ಹೊಂದಿದ್ದರೆ ಅವರು ಇಷ್ಟು ರನ್‌ಗಳನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
ಇನ್ನು ಅಭಿಮನ್ಯು ಈಶ್ವರನ್ ಬಗ್ಗೆಯೂ ಗಂಗೂಲಿ ಮಾತನಾಡಿದ್ದು "ಅಭಿಮನ್ಯು ಈಶ್ವರನ್ ಕೂಡ ಕಳೆದ ಐದರಿಂದ ಆರು ವರ್ಷಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ರನ್‌ಗಳಿಸಿದ್ದಾರೆ. ಅವರಿಬ್ಬರನ್ನೂ ಕೈಬಿಡಲಾಗಿದೆ ಎಂದು ನನಗೆ ಆಶ್ಚರ್ಯವಾಗಿದೆ. ಆದರೆ ಭವಿಷ್ಯದಲ್ಲಿ ಅವರಿಗೆ ಅವಕಾಶ ಸಿಗಬೇಕು. ಆದರೆ ಯಶಸ್ವಿ ಜೈಸ್ವಾಲ್ ಉತ್ತಮ ಆಯ್ಕೆಯಾಗಿದ್ದಾರೆ" ಎಂದಿದ್ದಾರೆ ಗಂಗೂಲಿ.