ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಸ್ಟಾರ್ ಆಟಗಾರನನ್ನು ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟರ್ ಎಂದು ಬಣ್ಣಿಸಿದ್ದಾರೆ. ಈ 26ರ ವರ್ಷದ ಕ್ರಿಕೆಟಿಗ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗುವ ಹಾದಿಯಲ್ಲಿದ್ದಾರೆ ಎಂದು ಭವಿಷ್ಯ ನುಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತೀಯ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ತಂಡಕ್ಕೆ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಮರಳಿದ್ದಾರೆ. 2022ರ ನಂತರ ರಿಷಬ್ ಪಂತ್ ಟೆಸ್ಟ್ ತಂಡದ ಭಾಗವಾಗುತ್ತಿರುವುದು ಇದೇ ಮೊದಲು. ರಿಷಬ್ ಪಂತ್ ತಂಡಕ್ಕೆ ಮರಳಿರುವ ಬಗ್ಗೆ ಸೌರವ್ ಗಂಗೂಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗಂಗೂಲಿ, 'ನಾನು ರಿಷಬ್ ಪಂತ್ ಅವರನ್ನು ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸುತ್ತೇನೆ. ಅವರು ಟೆಸ್ಟ್ ಕ್ರಿಕೆಟ್‌ಗೆ ಮರಳಿರುವುದು ನನಗೆ ಆಶ್ಚರ್ಯವಿಲ್ಲ. ಅವರು ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುವುದನ್ನು ಮುಂದುವರಿಸಲಿದ್ದಾರೆ. ಅವರು ಇದೇ ರೀತಿ ಪ್ರದರ್ಶನ ನೀಡಿದರೆ, ಅವರು ಟೆಸ್ಟ್ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗುತ್ತಾರೆ. ಅವರು ವೈಟ್ ಬಾಲ್ ಕ್ರಿಕೆಟ್ ಮಾದರಿಯಲ್ಲಿ ತಮ್ಮ ಪ್ರದರ್ಶನವನ್ನು ಸುಧಾರಿಸಬೇಕಾಗಿದೆ. ಅವರು ಪ್ರತಿಭಾವಂತ ಆಟಗಾರನಾಗಿದ್ದು, ಶೀಘ್ರದಲ್ಲೇ ಯಶಸ್ವಿಯಾಗುವುದು ನನಗೆ ತಿಳಿದಿದೆ" ಎಂದಿದ್ದಾರೆ.
ಡಿಸೆಂಬರ್ 2022ರಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡ ನಂತರ ಭಾನುವಾರ ಮೊದಲ ಬಾರಿಗೆ ಪಂತ್ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಚೆನ್ನೈ ನಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ -11 ರಲ್ಲಿ ಅವರ ಸ್ಥಾನ ಫಿಕ್ಸ್ ಆಗಿದೆ.
ರಿಷಬ್ ಪಂತ್ ಟೆಸ್ಟ್ ತಂಡಕ್ಕೆ ವಾಪಸಾಗಿರುವುದು ಭಾರತ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಇದಕ್ಕೆ ಕಾರಣ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅದ್ಭುತ ಪ್ರದರ್ಶನ. ಅವರು ಸ್ಪೋಟಕ ಬ್ಯಾಟಿಂಗ್ ಜೊತೆಗೆ ವಿಕೆಟ್‌ಕೀಪಿಂಗ್‌ನಲ್ಲೂ ಅಷ್ಟೇ ಯಶಸ್ವಿಯಾಗಿದ್ದಾರೆ.
2018ರ ಬಳಿಕ ರಿಷಭ್ ಪಂತ್ ಅವರ ಪ್ರದರ್ಶನವು ನಿರಂತರವಾಗಿ ಸುಧಾರಣೆಯನ್ನು ಕಂಡಿದೆ. ಅವರು ತಮ್ಮ ಕೀಪಿಂಗ್ ಮತ್ತು ಬ್ಯಾಟಿಂಗ್ ಕೌಶಲ್ಯಗಳಿಂದ ಎಲ್ಲರ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2020-21 ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಗೆಲುವು ಸಾಧಿಸಿತ್ತು. ಈ ಗೆಲುವಿನ ರೂವಾರಿ ಪಂತ್ ಆಗಿದ್ದರು. ಗಬ್ಬಾದಲ್ಲಿ ನಡೆದ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವರ 89 ರನ್‌ಗಳ ಅಜೇಯ ಮ್ಯಾಚ್-ಟರ್ನಿಂಗ್ ಇನ್ನಿಂಗ್ಸ್‌ನಿಂದ ಭಾರತ ಸರಣಿ ಗೆಲ್ಲಲು ನೆರವಾಗಿದ್ದರು.