ಈ ಆಟಗಾರರಿಗೆ ಅವಕಾಶ ಕೊಡಿ, ಇವರಿಗೆ ಕೊಡಬೇಡಿ ಎಂದಿದ್ರಾ ಗಂಗೂಲಿ? ಕೊನೆಗೂ ತುಟಿಬಿಚ್ಚಿದ ದಾದಾ

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ವಿವಾದ ಹಾಗೂ ಟೀಕೆಗಳಿಗೆ ಒಳಗಾಗಿರುವ ಕ್ರಿಕೆಟ್ ಬೋರ್ಡ್ ಯಾವುದು ಎಂಬ ಪ್ರಶ್ನೆ ಕಿವಿಗೆ ಬಿದ್ದ ಕೂಡಲೇ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಬಾಯಲ್ಲಿಯೂ ಬರುವ ಏಕೈಕ ಉತ್ತರವೆಂದರೆ ಅದು ಬಿಸಿಸಿಐ. ಹೌದು, ಇತ್ತೀಚಿನ ದಿನಗಳಲ್ಲಿ ಬಿಸಿಸಿಐ ಎದುರಿಸುತ್ತಿರುವಷ್ಟು ವಿವಾದ ಹಾಗೂ ಟೀಕೆಗಳನ್ನು ವಿಶ್ವದ ಯಾವುದೇ ಕ್ರಿಕೆಟ್ ಬೋರ್ಡ್ ಕೂಡ ಎದುರಿಸುತ್ತಿಲ್ಲ. ಬಿಸಿಸಿಐ ಮತ್ತು ಆಟಗಾರರ ನಡುವಿನ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ, ಬಿಸಿಸಿಐ ಯಾವುದೇ ತೀರ್ಮಾನವನ್ನು ಕೈಗೊಂಡರೂ ಸಹ ತಕ್ಷಣವೇ ಆಟಗಾರರಿಗೆ ತಿಳಿಸುವುದಿಲ್ಲ ಎಂಬ ಆರೋಪಗಳು ಈ ಹಿಂದೆಯಿಂದಲೂ ಸಾಕಷ್ಟು ಕೇಳಿ ಬರುತ್ತಿವೆ.
ಇನ್ನು ಬಿಸಿಸಿಐ ವಿರುದ್ಧ ಈ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿ ಬಂದದ್ದು ಹಾಗೂ ಹೆಚ್ಚಾದದ್ದು ಕಳೆದ ವರ್ಷ ವಿರಾಟ್ ಕೊಹ್ಲಿ ಭಾರತ ಸೀಮಿತ ಓವರ್ ತಂಡಗಳ ನಾಯಕತ್ವವನ್ನು ತ್ಯಜಿಸಿದ ನಂತರ. ಹೌದು, ವಿರಾಟ್ ಕೊಹ್ಲಿ ಭಾರತ ಸೀಮಿತ ಓವರ್ ತಂಡಗಳ ನಾಯಕತ್ವವನ್ನು ತ್ಯಜಿಸಿದ ಬೆನ್ನಲ್ಲೇ ಬಿಸಿಸಿಐ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲಿಯೂ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ವಿರಾಟ್ ಕೊಹ್ಲಿ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿಯೇ ಕಿಡಿಕಾರಿದ್ದರು. ಹೀಗೆ ಬಿಸಿಸಿಐ ಹಾಗೂ ಸೌರವ್ ಗಂಗೂಲಿ ವಿರುದ್ಧದ ಆಕ್ರೋಶ ಮತ್ತು ಅಸಮಾಧಾನ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ದುಪ್ಪಟ್ಟಾಯಿತು.
ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಆಟಗಾರ ಇದ್ದಕ್ಕಿದ್ದಂತೆ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ ಹೇರಿರುವ ಒತ್ತಡವೇ ಕಾರಣ ಮತ್ತು ಬಿಸಿಸಿಐ ಯಾವ ಆಟಗಾರ ನಾಯಕನಾಗಿರಬೇಕು ಎಂಬುದರಲ್ಲಿ ರಾಜಕೀಯವನ್ನು ಮಾಡುತ್ತಿದೆ ಎಂಬ ಆರೋಪಗಳನ್ನು ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಕೆಲ ಮಾಜಿ ಕ್ರಿಕೆಟಿಗರೂ ಸಹ ಮಾಡತೊಡಗಿದರು. ಇನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಯ್ಕೆ ಸಮಿತಿ ಸದಸ್ಯರು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜತೆ ಸಭೆಯನ್ನು ನಡೆಸಿದ್ದಾರೆ ಎಂಬ ವೈರಲ್ ಚಿತ್ರವೊಂದು ಈ ಎಲ್ಲಾ ಆರೋಪಗಳಿಗೆ ಪುಷ್ಟಿ ನೀಡಿದಂತಾಗಿತ್ತು. ಹೀಗೆ ತಮ್ಮ ವಿರುದ್ಧ ವ್ಯಕ್ತವಾಗಿದ್ದ ಆರೋಪಗಳ ಕುರಿತು ಇದುವರೆಗೂ ಮಾತನಾಡದೇ ಇದ್ದ ಸೌರವ್ ಗಂಗೂಲಿ ಇದೀಗ ಆ ವಿವಾದಗಳ ಕುರಿತಾಗಿ ತುಟಿಬಿಚ್ಚಿದ್ದು, ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಇಂಥ ಅರ್ಥವಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅನಿವಾರ್ಯತೆ ನನಗಿಲ್ಲ
ಆಟಗಾರರನ್ನು ಆಯ್ಕೆ ಮಾಡುವುದರಲ್ಲಿ ಶಾಮೀಲಾಗುತ್ತಿದ್ದಾರೆ ಎನ್ನುವುದರ ಕುರಿತು ಸ್ವತಃ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ ಇದೆಲ್ಲಾ ಅರ್ಥವಿಲ್ಲದ ವಿಷಯಗಳು ಎಂದು ತಳ್ಳಿಹಾಕಿದ್ದಾರೆ. ಬಿಸಿಸಿಐನ ಅಧ್ಯಕ್ಷನಾಗಿ ನಾನು ಯಾವ ಕೆಲಸಗಳನ್ನು ಮಾಡಬೇಕು ಆ ಕೆಲಸಗಳನ್ನು ಮಾಡುತ್ತಿದ್ದೇನೆ ಇಲ್ಲಿ ನಾನು ಯಾರಿಗೂ ಯಾವುದರ ಕುರಿತಾಗಿಯೂ ಉತ್ತರಿಸಬೇಕಾದ ಅನಿವಾರ್ಯತೆ ಇಲ್ಲ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಚಿತ್ರ ನಿಜವಲ್ಲ
ಇನ್ನು ಸೌರವ್ ಗಂಗೂಲಿ ಆಯ್ಕೆಗಾರರು ಹಾಗೂ ವಿರಾಟ್ ಕೊಹ್ಲಿ ಜತೆಗಿದ್ದ ಚಿತ್ರ ವೈರಲ್ ಆಗಿದ್ದರ ಕುರಿತು ಸ್ವತಃ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ ಆ ಚಿತ್ರ ಆಯ್ಕೆಗಾರರ ಸಮಿತಿಯ ಸಭೆಯ ಚಿತ್ರವಲ್ಲ ಎಂಬುದನ್ನು ಸ್ಪಷ್ಟೀಕರಿಸಿದ್ದಾರೆ. ಈ ಮೂಲಕ ತಾನು ಆಯ್ಕೆ ಸಮಿತಿಯ ಯಾವುದೇ ಸಭೆಯಲ್ಲಿಯೂ ಕೂಡ ಪಾಲ್ಗೊಂಡಿಲ್ಲ ಹಾಗೂ ಇಂಥ ಆಟಗಾರರಿಗೆ ಅವಕಾಶ ನೀಡಿ ಮತ್ತು ಇವರಿಗೆ ನೀಡಬೇಡಿ ಎಂದು ಯಾವುದೇ ಸಲಹೆಯನ್ನು ಕೂಡ ನೀಡಿಲ್ಲ ಎಂದು ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ.

ನಾನು ಟೀಮ್ ಇಂಡಿಯಾ ಪರ 424 ಪಂದ್ಯಗಳನ್ನಾಡಿದ್ದೇನೆ ಎಂಬುದನ್ನು ಮರೆಯದಿರಿ
ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿರುವ ಸೌರವ್ ಗಂಗೂಲಿ ತಾನು ಟೀಮ್ ಇಂಡಿಯಾ ಪರ 424 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದೇನೆ ಎಂಬುದನ್ನು ನೆನಪಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ. ಈ ರೀತಿಯ ಹೇಳಿಕೆ ನೀಡುವುದರ ಮೂಲಕ ಆಟಗಾರನಾಗಿ ಇಷ್ಟು ಪಂದ್ಯಗಳಲ್ಲಿ ಶ್ರಮಿಸಿದ ತಾನು ರಾಜಕೀಯ ಮಾಡುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಗಂಗೂಲಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications