
ಬೆಂಗಳೂರು, ಸೆಪ್ಟೆಂಬರ್ 30: 14ನೇ ಏಷ್ಯಾ ಕಪ್ ಗೆದ್ದ ರೋಹಿತ್ ಶರ್ಮ ನೇತೃತ್ವದ ಟೀಂ ಇಂಡಿಯಾಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ನಾಯಕ ರೋಹಿತ್ ಶರ್ಮ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗುತ್ತಿಲ್ಲ ಎಂಬುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಏಷ್ಯಾಕಪ್ನಲ್ಲಿ ಅದ್ಭುತ ಬ್ಯಾಟಿಂಗ್ಪ್ರದರ್ಶನ ನೀಡಿದ್ದಲ್ಲದೆ, ಉತ್ತಮವಾಗಿ ನಾಯಕತ್ವ ನಿಭಾಯಿಸಿದ ರೋಹಿತ್ ಶರ್ಮಾ ಅವರು ಟೆಸ್ಟ್ಸರಣಿಗೆ ಆಯ್ಕೆಯಾಗದೆ, ಸಮಿತಿಯಿಂದ ಅವಕೃಪೆಗೆ ಒಳಗಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗಾಗಿ ಟೀಂ ಇಂಡಿಯಾ ಆಯ್ಕೆಗೊಂಡಿದ್ದು, 15 ಸದಸ್ಯರನ್ನೊಳಗೊಂಡ ಬಳಗದಲ್ಲಿ ರೋಹಿತ್ ಶರ್ಮಾ ಆಯ್ಕೆಗೊಂಡಿಲ್ಲ. ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಗಂಗೂಲಿ, ಪ್ರತಿ ಸಲವು ಟೆಸ್ಟ್ ತಂಡದಲ್ಲಿ ನಿನ್ನ ಹೆಸರು ಇಲ್ಲದಿರುವುದು ನಿಜಕ್ಕೂ ಸರಿಯಲ್ಲ. ರೋಹಿತ್ ಅವರನ್ನು ತಂಡದಲ್ಲಿ ಕಾಣುವ ದಿನಗಳು ದೂರವಿಲ್ಲ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಟ್ವೀಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ತಂಡದಲ್ಲಿ ರೋಹಿತ್ ಶರ್ಮಾ ಹೆಸರು ಇಲ್ಲದಿರುವುದು ನನಗೆ ಆಶ್ಚರ್ಯವಾಗಿದ್ದು, ಪ್ರತಿ ಸಲವು ಟೆಸ್ಟ್ ತಂಡದಲ್ಲಿ ನಿನ್ನ ಹೆಸರು ಇಲ್ಲದಿರುವುದು ನಿಜಕ್ಕೂ ಸರಿಯಲ್ಲ ಎಂದಿದ್ದಾರೆ.
ಕಳೆದ ಜನವರಿ ತಿಂಗಳಲ್ಲಿ ಭಾರತದ ಪರ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದ್ದರು.ಆದರೆ, ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಹೀಗಾಗಿ, ಮೂರನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿರಲಿಲ್ಲ. ಇದಾದ ಬಳಿಕ ಅಫ್ಘಾನಿಸ್ತಾನದ ವಿರುದ್ಧದ ಏಕೈಕ ಟೆಸ್ಟ್ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೂ ರೋಹಿತ್ ಆಯ್ಕೆಯಾಗಿರಲಿಲ್ಲ. ಈಗ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಪರಿಗಣಿಸಿಲ್ಲ.
31 ವರ್ಷ ವಯಸ್ಸಿನ ರೋಹಿತ್ ಶರ್ಮ ಅವರು 25 ಪಂದ್ಯಗಳಿಂದ 1,479 ರನ್ ಗಳಿಸಿದ್ದು, 40ಕ್ಕಿಂತ ಕಡಿಮೆ ಸರಾಸರಿ ಹೊಂದಿದ್ದಾರೆ.