
ಕೇಪ್‌ಟೌನ್, ಮಾರ್ಚ್ 16: ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಆಟಗಾರ ಜೆಪಿ ಡುಮಿನಿ ಅವರು ಅಂತಾರಾಷ್ಟ್ರೀಯ ಏಕದಿನದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಈ ಬಾರಿಯ ವಿಶ್ವಕಪ್ ಬಳಿಕ ಏಕದಿನದಿಂದ ನಿವೃತ್ತಿ ಘೋಷಿಸಲಿರುವುದಾಗಿ ಶುಕ್ರವಾರ (ಮಾರ್ಚ್ 15) ಅವರು ತಿಳಿಸಿದ್ದಾರೆ.
2017ರ ಸೆಪ್ಟೆಂಬರ್ ನಲ್ಲಿ ಡುಮಿನಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇನ್ನು ಏಕದಿನಕ್ಕೂ ವಿದಾಯ ಹೇಳಿದ ಬಳಿಕ ಡುಮಿನಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಮಾತ್ರ ಕೊಂಚ ಕಾಲ ಪಾಲ್ಗೊಳ್ಳಲಿದ್ದಾರೆ. ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ-ಶ್ರೀಲಂಕಾ ಏಕದಿನ ಸರಣಿಯ 4ನೇ ಪಂದ್ಯದಲ್ಲಿ ಜೀನ್ ಪೌಲ್, 21 ರನ್ನಿಗೆ 1 ವಿಕೆಟ್ ಮತ್ತು ಅಜೇಯ 31 ರನ್ ಬಾರಿಸಿದ್ದರು. ಪಂದ್ಯದಲ್ಲಿ ಆಫ್ರಿಕಾ 6 ವಿಕೆಟ್ ಜಯ ಸಾಧಿಸಿತು.
'ಇಂಥ ನಿರ್ಧಾರಗಳನ್ನು ಪ್ರಕಟಿಸೋದು ಸುಲಭವಿಲ್ಲ. ಆದರೆ ನನಗೂ ಇದು ಮುನ್ನಡೆಯಲು ಸಕಾಲ ಅನ್ನಿಸ್ತಿದೆ. ಅಂತಾರಾಷ್ಟ್ರೀಯ ಮತ್ತು ದೇಸಿ ಟಿ20 ಕ್ರಿಕೆಟ್‌ಗೆ ನಾನು ಲಭ್ಯನಿದ್ದೇನೆ. ಇದರ ಜೊತೆಗೆ ನಾನು ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸಿದ್ದೇನೆ' ಎಂದು ನಿವೃತ್ತಿ ನಿರ್ಧಾರ ಪ್ರಕಟಿಸಿದ ಬಳಿಕ ಡುಮಿನಿ ಹೇಳಿದರು.
34ರ ಹರೆಯದ ಜೀನ್ ಪೌಲ್ ಡುಮಿನಿ 175 ಏಕದಿನ ಇನ್ನಿಂಗ್ಸ್‌ಗಳಲ್ಲಿ 37.39ರ ಸರಾಸರಿಯಂತೆ 5,047 ರನ್ ಗಳಿಸಿದ್ದಾರೆ. ಇದರಲ್ಲಿ 150 ವೈಯಕ್ತಿಯ ಅತ್ಯಧಿಕ ರನ್, 4 ಶತಕ, 27 ಅರ್ಧ ಶತಕಗಳು ಸೇರಿವೆ. 130 ಏಕದಿನ ಇನ್ನಿಂಗ್ಸ್‌ಗಳಲ್ಲಿ 5.35ರ ಎಕಾನಮಿಯಲ್ಲಿ 45.09ರ ಸರಾಸರಿಯಲ್ಲಿ 68 ವಿಕೆಟ್‌ಗಳನ್ನೂ ಪಡೆದಿದ್ದಾರೆ.