ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ನಾಲ್ಕನೇ ಮತ್ತು ಕೊನೆಯ ಸೆಮಿಫೈನಲಿಸ್ಟ್ ತಂಡವನ್ನು ನಿರ್ಧರಿಸಲಾಗಿದೆ. ಭಾರತ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಂತರ, ದಕ್ಷಿಣ ಆಫ್ರಿಕಾ ಅಗ್ರ -4 ರಲ್ಲಿ ಸ್ಥಾನ ಪಡೆದಿದೆ. ಬಿ ಗುಂಪಿನಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 179 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 29.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸೆಮಿಫೈನಲ್ ತಲುಪಿತು.

ಇಂಗ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ 5 ಅಂಕಗಳೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಇಂಗ್ಲೆಂಡ್ ಯಾವುದೇ ಗೆಲುವಿಲ್ಲದೆ ಚಾಂಪಿಯನ್ಸ್ ಟ್ರೋಫಿಗೆ ವಿದಾಯ ಹೇಳಬೇಕಾಯಿತು. ದಕ್ಷಿಣ ಆಫ್ರಿಕಾ ನಾಲ್ಕನೇ ಸೆಮಿಫೈನಲಿಸ್ಟ್ ಆದ ನಂತರ, ಅಫ್ಘಾನಿಸ್ತಾನದ ಪ್ರಯಾಣವೂ ಕೊನೆಗೊಂಡಿದೆ.
ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ ಸುಲಭ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಕಳಪೆ ಬ್ಯಾಟಿಂಗ್ ಪರಿಣಾಮವಾಗಿ ಇಡೀ ತಂಡವು ಕೇವಲ 179 ರನ್‌ಗಳಿಗೆ ಆಲೌಟ್ ಆಯಿತು. ಜೋ ರೂಟ್ 37 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸೆನ್ ಮತ್ತು ಮುಲ್ಡರ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಸುಲಭ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ರಾಸ್ಸಿ ವ್ಯಾನ್ ಡೆರ್ ಡಸೆನ್ ಅಜೇಯ 72 ಮತ್ತು ಹೆನ್ರಿಕ್ ಕ್ಲಾಸೆನ್ (64) ಅವರ ಅರ್ಧಶತಕ ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.
ಮಾರ್ಚ್ 2 ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಫಲಿತಾಂಶದ ಮೇಲೆ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ನಲ್ಲಿ ಯಾವ ತಂಡವನ್ನು ಎದುರಿಸಲಿದೆ ಎಂಬುದು ನಿರ್ಧರವಾಗಲಿದೆ. ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಗೆದ್ದರೆ ದಕ್ಷಿಣ ಆಫ್ರಿಕಾ ತಂಡವು ಕಿವೀಸ್ ಪಡೆಯನ್ನು ಎದುರಿಸಲಿದೆ. ಒಂದು ವೇಳೆ ನ್ಯೂಜಿಲೆಂಡ್ ಗೆದ್ದರೆ ದಕ್ಷಿಣ ಆಫ್ರಿಕಾ ತಂಡವು ಸೆಮಿಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.
ಎ ಗುಂಪು: ಭಾರತ, ನ್ಯೂಜಿಲೆಂಡ್
ಬಿ ಗುಂಪು: ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ