ಲಾರ್ಡ್ಸ್ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್

ಲಂಡನ್, ಜುಲೈ 19: ಚೆಂಡನ್ನು ನಿರಾಯಾಸವಾಗಿ ಕ್ರೀಡಾಂಗಣದ ಯಾವುದೇ ಮೂಲೆಗೆ ಸಿಕ್ಸರ್‌ಗೆ ಅಟ್ಟುವ ಸಾಮರ್ಥ್ಯದಿಂದಲೇ ವಿಶ್ವ ಕ್ರಿಕೆಟ್‌ನಲ್ಲಿ 'ಮಿಸ್ಟರ್ 360 ಡಿಗ್ರಿ' ಎಂದೇ ಖ್ಯಾತಿ ಪಡೆದುಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿ'ವಿಲಿಯರ್ಸ್, ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್ ಟೂರ್ನಿಗೆ ಅದ್ಧೂರಿಯಾಗಿ ಪದಾರ್ಪಣೆ ಮಾಡಿದ್ದಾರೆ.
ಇಲ್ಲಿನ ಇತಿಹಾಸ ಪ್ರಸಿದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಎಸೆಕ್ಸ್ ವಿರುದ್ಧದ ಟಿ20 ಪಂದ್ಯದಲ್ಲಿ ತಮ್ಮ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಮಿಡ್ಲ್‌ಸೆಕ್ಸ್ ತಂಡಕ್ಕೆ ಡಿ'ವಿಲಿಯರ್ಸ್ 7 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು.
ಕಳೆದ ಭಾನುವಾರವಷ್ಟೇ ಸೀಮಿತ ಓವರ್ ಮತ್ತು ಸೂಪರ್ ಓವರ್ ಎರಡರಲ್ಲೂ ಟೈ ಫಲಿತಾಂಶ ಕಂಡ ರೋಚಕ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿದ್ದ ಲಾರ್ಡ್ಸ್ ಪ್ರೇಕ್ಷಕರಿಗೆ ಬಿಬಿಡಿ ತಮ್ಮ 360 ಡಿಗ್ರಿ ಹೊಡೆತಗಳ ದರ್ಶನ ಮಾಡಿಸಿದರು. ಮಿಡ್ಲ್‌ಸೆಕ್ಸ್ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಎಬಿಡಿ, 43 ಎಸೆತಗಳಲ್ಲಿ 6 ಅದ್ಭುತ ಸಿಕ್ಸರ್ ಮತ್ತು 5 ಫೋರ್‌ಗಳ ನೆರವಿನೊಂದಿಗೆ 204.64ರ ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 88 ರನ್‌ಗಳನ್ನು ಚೆಚ್ಚಿದರು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸೆಕ್ಸ್ ತಂಡ ಆಲ್‌ರೌಂಡರ್ ರಯಾನ್ ಟೆನ್ ಡಾಯ್ಷೆಟ್ (46 ಎಸೆತ, 74* ರನ್) ಅಜೇಯ ಅರ್ಧಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 164 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಮಿಡ್ಲ್‌ಸೆಕ್ಸ್ ತಂಡ ಡಿ'ವಿಲಿಯರ್ಸ್ ವಿಶ್ವರೂಪದ ನೆರವಿನಿಂದ ಇನ್ನು ಮೂರು ಓವರ್‌ಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 166 ರನ್‌ಗಳನ್ನು ಚೆಚ್ಚಿ ಸುಲಭ ಜಯ ದಾಖಲಿಸಿತು. ಡಿ'ವಿಲಿಯರ್ಸ್ ಆರಂಭಿಕ ಬ್ಯಾಟ್ಸ್‌ಮನ್ ಡಾವಿಡ್ ಮಲಾನ್ (43 ರನ್) ಅವರೊಟ್ಟಿಗೆ ಶತಕದ ಜೊತೆಯಾಟವಾಡಿದರು.
ವಿಶ್ವಕಪ್ ವಿವಾದದಲ್ಲಿ ಎಬಿಡಿ
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಡಿ'ವಿಲಿಯರ್ಸ್, ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಕುರಿತಾಗಿ ಇಂತಿತ ವ್ಯಕ್ತ ಪಡಿಸಿದ್ದರು. ವಿಶ್ವಕಪ್‌ಗೆ ತಂಡ ಪ್ರಕಟಿಸುವುದಕ್ಕೂ ಒಂದು ದಿನ ಮೊದಲೇ ಎಬಿಡಿ, ನಾಯಕ ಫಾಫ್ ಡು'ಪ್ಲೆಸಿಸ್ ಅವರನ್ನು ಸಂಪರ್ಕಿಸಿ ವಿಶ್ವಕಪ್‌ನಲ್ಲಿ ಆಡುವ ಬಯಕೆ ವ್ಯಕ್ತ ಪಡಿಸಿದ್ದರು. ಆದರೆ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಇದಕ್ಕೆ ಸಮ್ಮತಿಸದೇ ಹೋಯಿತು. ವಿಶ್ವಕಪ್‌ನಲ್ಲಿ ಅನುಭವಿ ಬ್ಯಾಟ್ಸ್‌ಮನ್‌ಗಳ ಕೊರತೆ ಎದುರಿಸಿದ ದಕ್ಷಿಣ ಆಫ್ರಿಕಾ ತಂಡ ಲೀಗ್ ಹಂತದಲ್ಲೇ ಸೋತು ಹೊರಬಿದ್ದಿತು.
ಸ್ಪಷ್ಟಣೆ ನೀಡಿದ್ದ ಡಿ'ವಿಲಿಯರ್ಸ್
ವಿಶ್ವಕಪ್ ತಂಡ ಸೇರುವ ವಿವಾದದ ಕುರಿತಾಗಿ ಕೊನೆಗೂ ಮೌನ ಮುರಿದಿದ್ದ 35 ವರ್ಷದ ಅನುಭವಿ ಕ್ರಿಕೆಟಿಗ ಡಿ'ವಿಲಿಯರ್ಸ್, ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಮಾತನಾಡಿ ತಾವು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯನ್ನು ಸಂಪರ್ಕಿಸಿರಲಿಲ್ಲ ಎಂದು ಸ್ಪಷ್ಟ ಪಡಿಸಿದರು. ಅಷ್ಟೇ ಅಲ್ಲದೆ ತಂಡದ ನಾಯಕ ಹಾಗೂ ಅವರ ಆಪ್ತ ಗೆಳೆಯ ಫಾಫ್ ಡು'ಪ್ಲೆಸಿಸ್‌ಗೆ ಕರೆ ಮಾಡಿ ತಂಡಕ್ಕೆ ಅಗತ್ಯವಿದ್ದರೆ ಸೇವೆಗೆ ಹಾಜರಾಗುವುದಾಗಿ ಹೇಳಿದ್ದಾಗಿ ನೈಜ ಸಂಗತಿಯನ್ನು ವಿವರಿಸಿದ್ದರು. "ತಂಡದ ಆಯ್ಕೆ ಸಮಿತಿ ಮೇಲಾಗಲಿ ಅಥವಾ ನಾಯಕ ಫಾಫ್ ಡು'ಪ್ಲೆಸಿಸ್ ಮೇಲಾಗಲಿ ನಾನು ಒತ್ತಡ ಹೇರಿರಲಿಲ್ಲ," ಎಂದು ಎಬಿಡಿ ಸ್ಪಷ್ಟ ಪಡಿಸಿದ್ದರು.
ದೇಶಕ್ಕಿಂತಲೂ ದುಡ್ಡೇ ಹೆಚ್ಚಾಗಿತ್ತೆ?
ಇನ್ನು ಡಿವಿಲಿಯರ್ಸ್ ತಂಡಕ್ಕೆ ಮರಳಲು ಸಿದ್ದರಿದ್ದರೂ ಅವರಿಗೆ ಅವಕಾಶ ನೀಡಲಿಲ್ಲವೇಕೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯನ್ನು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದರು. ಇದಕ್ಕೆ ಕ್ರಿಕೆಟ್ ಸೌತ್ ಆಫ್ರಿಕಾದ ಆಯ್ಕೆ ಸಮಿತಿಯ ವಕ್ತಾರ ಉತ್ತರ ನೀಡಿ, "ಡಿ'ವಿಲಿಯರ್ಸ್ ಅವರಿಗೆ ನಿವೃತ್ತಿಯಿಂದ ಹೊರಬಂದು ವಿಶ್ವಕಪ್ ತಂಡ ಸೇಡಿಕೊಳ್ಳುವಂತೆ ಮೊದಲೇ ಆಹ್ವಾನ ನೀಡಲಾಗಿತ್ತು. ಇದಕ್ಕಾಗಿ ಅವರು ತವರಿನಲ್ಲಿ ನಡೆದ ಕೆಲ ಸರಣಿಗಳಲ್ಲಿ ಪಾಲ್ಗೊಳ್ಳಬೇಕಿತ್ತು ಅಷ್ಟೇ. ಆದರೆ ಅವರು ಈ ಆಹ್ವಾನವನ್ನು ನಿರಾಕರಿಸಿ ಐಪಿಎಲ್‌ನಂತಹ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರು," ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್, "ಡಿ'ವಿಲಿಯರ್ಸ್ ತಮ್ಮ ದೇಶಕ್ಕಾಗಿ ಆಡುವ ಬದಲಾಗಿ ಹಣ ಗಳಿಸಲು ಐಪಿಎಲ್‌ನಂತಹ ಟೂರ್ನಿಗಳಲ್ಲಿ ಆಡಿದ್ದಾರೆ," ಎಂದು ಕಟುವಾಗಿ ಟೀಕಿಸಿದ್ದರು.
ಎಬಿ ಡಿ'ವಿಲಿಯರ್ಸ್ ಟಿ20 ಕ್ರಿಕೆಟ್ ಸಾಧನೆ
288 ಪಂದ್ಯ
7926 ರನ್
133* ಗರಿಷ್ಠ
36.86 ಸರಾಸರಿ
149.12 ಸ್ಟ್ರೈಕ್‌ರೇಟ್
04 ಶತಕ
54 ಅರ್ಧಶತಕ
647 ಫೋರ್‌ಗಳು
366 ಸಿಕ್ಸರ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications