ಭಾರೀ ಕುತೂಹಲ ಮೂಡಿಸಿರುವ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಯುಎಇಯಲ್ಲಿ ನಡೆಯುತ್ತಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ತಂಡದ ಸ್ಟಾರ್ ಬೌಲರ್ ಗಾಯಗೊಂಡಿರುವ ಕಾರಣ ಪ್ರಸಕ್ತ ಸರಣಿ ಮತ್ತು ಬಾಂಗ್ಲಾದೇಶ ವಿರುದ್ಧದ ಮುಂದಿನ ಸರಣಿಯಿಂದ ಹೊರಗುಳಿಯಬೇಕಾಗಿದೆ.
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ನಾಂದ್ರೆ ಬರ್ಗರ್ ಗಾಯಗೊಂಡಿರುವ ಕಾರಣ ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿ ಮತ್ತು ಮುಂಬರುವ ಬಾಂಗ್ಲಾದೇಶದ ಟೆಸ್ಟ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಬೇರೆ ಆಟಗಾರರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

29 ವರ್ಷದ ವೇಗದ ಬೌಲರ್ ನಾಂದ್ರೆ ಬರ್ಗರ್ ಅವರು ಬೆನ್ನು ನೋವಿನ ಗಾಯಕ್ಕೆ ತುತ್ತಾಗಿದ್ದಾರೆ. ಈಗಾಗಲೇ ಅವರನ್ನು ವೈದಕೀಯ ತಪಾಸಣೆಗೆ ಒಳಪಡಿಸಿದ್ದು, ಸ್ಕ್ಯಾನ್ ಕೂಡ ಮಾಡಲಾಗಿದೆ. ಸದ್ಯ ಗಾಯಗೊಂಡಿರುವ ಅವರು ಮನೆಗೆ ಹಿಂತಿರುಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಅವರ ಬದಲಿ ಆಟಗಾರನನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ) ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ನಾಂದ್ರೆ ಬರ್ಗರ್ ಅವರು ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರು. ದಕ್ಷಿಣ ಆಫ್ರಿಕಾ ಪರ ಅವರು, 2023ರ ಡಿಸೆಂಬರ್ ತಿಂಗಳಲ್ಲಿ ಭಾರತದ ವಿರುದ್ಧ ಎಲ್ಲಾ ಮೂರು ಮಾದರಿ ಕ್ರಿಕೆಟ್‌ನಲ್ಲಿಯೂ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದರು. ಈ ವೇಳೆ ಅವರು ತಮ್ಮ ವೇಗ ಮತ್ತು ಸ್ವಿಂಗ್‌ನಿಂದ ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ಸಖತ್ ಕಾಟ ನೀಡಿದ್ದರು. ಅವರು ಇಲ್ಲಿಯವರೆಗೆ ಹರಿಣಗಳ ಪಡೆಗೆ 3 ಟೆಸ್ಟ್‌ಗಳಲ್ಲಿ 14 ವಿಕೆಟ್, 5 ಏಕದಿನ ಪಂದ್ಯಗಳಲ್ಲಿ 6 ವಿಕೆಟ್ ಮತ್ತು ಎರಡು ಟಿ20 ಗಳಲ್ಲಿ 1 ವಿಕೆಟ್ ಪಡೆದಿದ್ದಾರೆ.
ಪ್ರಸ್ತುತ ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯನ್ನು ಪೂರ್ಣಗೊಳಿಸಿದ ನಂತರ, ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದೆ. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಅಕ್ಟೋಬರ್ 21 ರಿಂದ 25 ರವರಗೆ ಢಾಕಾದ ಮೀರ್‌ಪುರದಲ್ಲಿರುವ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿವೆ. ಇದಾದ ಬಳಿಕ ಉಭಯ ತಂಡಗಳು ಅಕ್ಟೋಬರ್ 29 ರಿಂದ ನವೆಂಬರ್ 2 ರವರೆಗೆ ಚಿತ್ತಗಾಂಗ್‌ನ ಜಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.