ಜುಲೈ 5 ಶುಕ್ರವಾರ, ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಎದುರು ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಟಿ20 ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ದಕ್ಷಿಣ ಆಫ್ರಿಕಾ ನೀಡಿದ 190 ರನ್ ಬೃಹತ್ ಟಾರ್ಗೆಟ್ ಅನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 177 ರನ್ ಗಳಿಸಲಷ್ಟೇ ಶಕ್ತಿವಾಯಿತು. ಇದರೊಂದಿಗೆ ದಕ್ಷಿಣ ಆಫ್ರಿಕಾ ವನಿತೆಯರು 12 ರನ್‌ಗಳ ಭರ್ಜರಿ ಜಯ ಕಂಡರು.

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸಿಂಗ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಆರಂಭಿಸಿತು. ಹರ್ಮನ್‌ಪ್ರೀತ್ ನಿರೀಕ್ಷೆತಯಂತೆ ಟೀಮ್ ಇಂಡಿಯಾ ಬೌಲರ್‌ಗಳು ಬೌಲಿಂಗ್ ಮಾಡಲಿಲ್ಲ.
ಇದರ ಲಾಭ ಪಡೆದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡಯಿತು. ಮೊದಲ ವಿಕೆಟ್‌ಗೆ ನಾಯಕಿ ಲಾರಾ ವೊಲ್ವಾರ್ಡ್ಟ್ ಮತ್ತು ತಜ್ಮಿನ್ ಬ್ರಿಟ್ಸ್ 50 ರನ್‌ಗಳ ಜೊತೆಯಾಟವಾಡಿದರು. ಇದಾದ ನಂತರ ಲಾರಾ ವೊಲ್ವಾರ್ಡ್ಟ್ 22 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರು.
ಮೂರನೇ ಕ್ರಮಾಂಕದಲ್ಲಿ ಬಂದ ಮರಿಜಾನ್ನೆ ಕಪ್ ಅವರೊಂದಿಗೆ ಜೊತೆಗೂಡಿ ತಜ್ಮಿನ್ ಬ್ರಿಟ್ಸ್ ಅವರು ಟೀಮ್ ಇಂಡಿಯಾ ವನಿತೆಯರನ್ನು ಬೆಂಡೆತ್ತಿದರು. ಮರಿಜಾನ್ನೆ ಕಪ್ ಮತ್ತು ತಜ್ಮಿನ್ ಬ್ರಿಟ್ಸ್ ಇಬ್ಬರು ಅರ್ಧಶತಕ ಸಿಡಿಸಿ ಮಿಂಚಿದರು.
ಮರಿಜಾನ್ನೆ ಕಪ್ 33 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳ ಮೂಲಕ 57 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು.
ಇನ್ನೊಂದೆಡೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ತಜ್ಮಿನ್ ಬ್ರಿಟ್ಸ್ ಕೇವಲ 56 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 10 ಬೌಂಡರಿ ನೆರವಿನಿಂದ 81 ರನ್ ಗಳಿಸಿ ಔಟಾದರೆ, ಕ್ಲೋಯ್ ಟ್ರಯಾನ್ 12 ರನ್ ಹೊಡೆದು ವಿಕೆಟ್ ಕಳೆದುಕೊಂಡರು. ಈ ಮೂಲಕ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 189 ರನ್‌ಗಳ ಕಲೆ ಹಾಕಿತು.
ಟೀಮ್ ಇಂಡಿಯಾ ಪರ ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ತಲಾ 2 ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ನೀಡಿದ 190 ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಪರ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಅಬ್ಬರ ಆಟವಾಡಿದರು. ಅದ್ಭುತವಾಗಿ ಆಡುತ್ತಿದ್ದ ಶಫಾಲಿ ವರ್ಮಾ 18 ರನ್ ಗಳಿಸಿ ಔಟಾದರು. ಇನ್ನೊಂದೆಡೆ ಸ್ಮೃತಿ ಮಂಧಾನ ತಮ್ಮ ಉತ್ತಮ ಫಾರ್ಮ್ ಮುಂದುವರೆಸಿ 46 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು.
ಇದಾದ ಬಳಿಕ ದಯಾಲನ್ ಹೇಮಲತಾ ಕೂಡ 14 ರನ್‌ಗೆ ಔಟಾದರು. ಕೊನೆಯಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಜೆಮಿಮಾ ರಾಡ್ರಿಗಸ್ ಮತ್ತು ಹರ್ಮನ್‌ಪ್ರೀತ್ ಕೌರ್ ಹೋರಾಡಿದರು. ಆದರೆ 35 ರನ್ ಗಳಿಸಿದ ಹರ್ಮನ್‌ಪ್ರೀತ್ ಗೆಲುವಿನ ಸನಿಹದಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಈ ಹಂತದಲ್ಲಿ ಜೆಮಿಮಾ ರಾಡ್ರಿಗಸ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಜೆಮಿಯಾ 30 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ ಅಜೇಯ 53 ರನ್‌ಗಳಿಸಿದರು.ಆದರೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಗುರಿಯನ್ನು ತಲುಪಲು ಸಾಧ್ಯವಾಗದೆ ಸೋಲು ಅನುಭವಿಸಿತು.
ದಕ್ಷಿಣ ಆಪ್ರಿಕಾ ಪರ ಅಯಾಬೊಂಗಾ ಖಾಕಾ, ಕ್ಲೋಯ್ ಟ್ರಯಾನ್, ನಾನ್ಕುಲುಲೆಕೊ ಮ್ಲಾಬಾ ಮತ್ತು ನಡಿನ್ ಡಿ ಕ್ಲರ್ಕ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.