
ಲಂಡನ್, ಮೇ 23: ಐದು ಬಾರಿಯ ವಿಶ್ವ ಚಾಂಪಿಯನ್ಸ್ ಆಸ್ಟ್ರೇಲಿಯಾದ ದೌರ್ಬಲ್ಯ ಏನು ಎಂಬುದನ್ನು ತಂಡಕ್ಕೆ ಎರಡು ಬಾರಿ ಪ್ರಸಸ್ತಿ ಗೆದ್ದುಕೊಟ್ಟಿರುವ ಮಾಜಿ ನಾಯಕ ರಿಕಿ ಪಾಂಟಿಂಗ್ ಬಾಯ್ಬಿಟ್ಟಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 12ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಪ್ರಶಸ್ತಿ ಉಳಿಸಿಕೊಳ್ಳುವುದು, ಸ್ಪಿನ್ನರ್‌ಗಳ ವಿರುದ್ಧ ತಂಡದ ಬ್ಯಾಟ್ಸ್‌ಮನ್‌ಗಳು ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎನ್ನುವುದರ ಮೇಲೆ ನಿರ್ಧರಿತವಾಗಿದೆ ಎಂದು ಹೇಳಿರುವ ಪಾಂಟಿಂಗ್, ಸ್ಪಿನ್ ಬೌಲಿಂಗ್ ವಿರುದ್ಧ ಆಡುವುದೇ ಆಸೀಸ್ ಪಡೆಯ ದೌರ್ಬಲ್ಯ ಎಂಬುರ ಕಡೆಗೆ ಪರೋಕ್ಷವಾಗಿ ಬೆಳಕು ಚೆಲ್ಲಿದ್ದಾರೆ.
"ಆಸ್ಟ್ರೇಲಿಯಾ ತಂಡ ವಿಶ್ವಕಪ್‌ನಲ್ಲಿ ಯಶಸ್ಸು ಗಳಿಸುವುದು ಎರಡು ಅಂಶಗಳನ್ನು ಆಧರಿಸಿದೆ. ಮೊದಲಿಗೆ ತಂಡ ಹೇಗೆ ಸ್ಪಿನ್ ಬೌಲಿಂಗ್ ದಾಳಿಯನ್ನು ಸಂಘಟಿಸುತ್ತದೆ ಎಂಬುದು. ಮತ್ತೊಂದು ಸ್ಪಿನ್ ಎದುರು ಹೇಗೆ ಆಡುತ್ತದೆ ಎಂಬುದು,'' ಎಂದು ಸಂದರ್ಶನ ಒಂದರಲ್ಲಿ ಪಾಂಟಿಂಗ್ ಹೇಳಿದ್ದಾರೆ.
"ಆಡಮ್ ಝಾಂಪ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಜೊತೆಗೆ ನೇಥನ್ ಲಯಾನ್ ಸೇರ್ಪಡೆಯಾಗಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಉತ್ತಮ ಲಯದದಲ್ಲಿದ್ದಾರೆ. ಇನ್ನು ತಂಡದ ಮಧ್ಯಮ ಕ್ರಮಾಂಕದ ಕೆಲ ಬ್ಯಾಟ್ಸ್‌ಮನ್‌ಗಳು ಸ್ಪಿನ್ ವಿರುದ್ಧ ಉತ್ತಮವಾಗಿ ಆಡಬಲ್ಲರು. ಜೊತೆಗೆ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸೇರ್ಪಡೆಯಾಗಿರುವುದು ತಂಡದ ಬಲ ಹೆಚ್ಚಿಸಿದೆ. ಇದರಿಂದ ಸ್ಪಿನ್ ಬೌಲಿಂಗ್ ಎದುರಿಸಲು ತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ,'' ಎಂದು ತಂಡದ ಸಾಮರ್ಥ್ಯ ಕುರಿತಾಗಿ ಪಾಂಟಿಂಗ್ ಮಾತನಾಡಿದ್ದಾರೆ.
2003 ಮತ್ತು 2007ರಲ್ಲಿ ಆಸ್ಟ್ರೇಲಿಯಾಗೆ ಎಕದಿನ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಟ್ಟ ನಾಯಕ ರಿಕಿ ಪಾಂಟಿಂಗ್ ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಜೊತೆಗೂಡಿ ಕಾಂಗರೂ ಪಡೆಗೆ 6 ಬಾರಿ ಪ್ರಶಸ್ತಿ ಗೆಲ್ಲಲು ಮಾರ್ಗದರ್ಶನ ನೀಡಲಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ಕೂಸು ಅಫಘಾನಿಸ್ತಾನ ವಿರುದ್ಧ ಜೂನ್ 1ರಂದು ಬ್ರಿಸ್ಟೋಲ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.