ಟೀಮ್ ಇಂಡಿಯಾದ ಸ್ಪಿನ್ ಬೌಲರ್ ರಾಹುಲ್ ಚಹಾರ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ಈಗಾಗಲೇ ಇವರು ಭಾರತ ಹಾಗೂ ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿ ಪರ ಆಡಿದ್ದು, ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿ ಹೊರ ಬಂದಿದೆ. ರಾಹುಲ್ ಚಹಾರ್ ಪತ್ನಿ ಇಶಾನಿ ಜೋಹರ್ ಅವರಿಗೆ ವಿಚ್ಛೇದನ ನೀಡಿದ ಬಗ್ಗೆ ಸಾಮಾಜಿಕ ತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಈ ವೇಳೆ ಈ ನಿರ್ಧಾರ ಕೈಗೊಳ್ಳಲು ಕಾರಣ ಏನು ಎಂಬುದನ್ನು ಸಹ ವಿವರಿಸಿದ್ದಾರೆ.
ಟೀಮ್ ಇಂಡಿಯಾದ ಪರ ಸ್ಪಿನ್ ಬೌಲರ್ ಆಗಿ ಆಡಿರುವ ಅನುಭವ ಹೊಂದಿರುವ ರಾಹುಲ್ ಚಹಾರ್ ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಇವರು ತಮ್ಮ ವಿಚ್ಛೇಧನವನ್ನು ಬಹಿರಂಗ ಪಡಿಸಿದ್ದಾರೆ.

ನಾನು ಚಿಕ್ಕ ವಯಸ್ಸಿನಲ್ಲೇ ಮದುವೆ ಆದೆ. ಆ ವಯಸ್ಸಿನಲ್ಲಿ ನನಗೆ ಸ್ವಂತ ಸಾಮರ್ಥ್ಯಗಳು ಅಥವಾ ಅವರ ಜೀವನ ಆಯ್ಕೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಇರಲಿಲ್ಲ. ಇದಾದ ಬಳಿಕ ಹಲವು ವರ್ಷಗಳು ನೋವು ಕಂಡಿದ್ದೇನೆ. ಜೀವನವು ನನಗೆ ದೊಡ್ಡ ಪಾಠವನ್ನು ಕಲಿಸಿದೆ. ಕಳೆದ 15 ತಿಂಗಳು ನಾನು ನ್ಯಾಯಕ್ಕಾಗಿ ಹೋರಾಡಿದ್ದೇನೆ. ಈ ವೇಳೆ ತಾಳ್ಮೆಯಿಂದ ಕಾಪಾಡಿಕೊಳ್ಳುವುದನ್ನು ಹೆಚ್ಚಾಗಿ ಕಲಿತಿದ್ದೇನೆ. ಈಗ ಈ ಎಲ್ಲ ಸಮಸ್ಯೆಗೂ ಪರಿಹಾರ ಸಿಕ್ಕಿದೆ. ಶುಕ್ರವಾರ (ಫೆ.20) ಜೀವನದ ಆ ಒಂದು ಭಾಗ ಅಧಿಕೃತವಾಗಿ ಕೊನೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ಸಂಬಂಧವನ್ನು ನಾನು ಯಾವುದೇ ಕೋಪ, ವಿಷಾಧವಿಲ್ಲ. ಇದನ್ನು ನಾನು ಹೊಸ ದೃಷ್ಟಿಕೋನದಿಂದ ನೋಡುತ್ತಿರುವೆ. ಇನ್ನು ಜೀವನದಲ್ಲಿ ಕೆಲವು ಸಂಬಂಧಗಳು ಶಾಶ್ವತವಾಗಿ ಉಳಿಸಲು ಬಯಸುವುದಿಲ್ಲ. ಇಂತಹ ಸಂಬಂಧಗಳು ನಮಗೆ ಹೊಸ ಪಾಠವನ್ನು ಕಲಿಸುತ್ತವೆ. ನಮ್ಮ ಬದಲಾವಣೆಗೆ ಈ ಕಲಿಕೆ ಸಹಾಯಕವಾಗಲಿದೆ. ಅಲ್ಲದೆ ನನಗೆ ಜೀವನದ ಬಗ್ಗೆ ಸಂಪೂರ್ಣ ವಿಶ್ವಾಸ ಇರುವುದಾಗಿ ರಾಹುಲ್ ಬರೆದುಕೊಂಡಿದ್ದಾರೆ.
ರಾಹುಲ್ ಚಹಾರ್ ಈ ಬಗ್ಗೆ ಮುಂದೆ ಬರೆದಿದ್ದು, ಇದು ಹೊಸ ಅಧ್ಯಾಯ. ಇದು ಮುಕ್ತಾಯವಲ್ಲ ಹೊಸ ಆರಂಭವಾಗಿದೆ. ಇನ್ನು ಮೇಲೆ ಸ್ವಾಭಿಮಾನ, ಶಾಂತಿ ಮತ್ತು ಸರಿಯಾದ ನಿರ್ಧಾರಗಳನ್ನು ಆಧರಿಸಿರುತ್ತದೆ ಎಂಬ ಭರವಸೆ ಇದೆ. ಯಾವುದೇ ಕಹಿ ನೆನಪುಗಳನ್ನು ಈ ವೇಳೆ ನನೊಂದಿಗೆ ತೆಗೆದುಕೊಂಡು ಮುಂದೆ ಸಾಗುವುದಿಲ್ಲ ಎಂದು ಚಹಾರ್ ತಿಳಿಸಿದ್ದಾರೆ.
26 ವರ್ಷದ ಚಹಾರ್ ಈಗಾಗಲೇ ಭಾರತದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಒಂದು ಏಕದಿನ ಪಂದ್ಯವನ್ನು ಆಡಿರುವ ಇವರು ಮೂರು ವಿಕೆಟ್ ಕಬಳಿಸಿದ್ದಾರೆ. ಇನ್ನು 6 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಇವರು ಐಪಿಎಲ್‌ನಲ್ಲೂ ತಮ್ಮ ಲೆಗ್ ಸ್ಪಿನ್ ಮೂಲಕ ಕಮಾಲ್ ಪ್ರದರ್ಶನ ನೀಡಿದ್ದು, ಆಡಿದ 79 ಪಂದ್ಯಗಳಲ್ಲಿ 75 ವಿಕೆಟ್ ಪಡೆದಿದ್ದಾರೆ. ಇವರು ಮತ್ತೆ ಬ್ಲ್ಯೂ ಜೆರ್ಸಿ ತೊಡುವ ಆಸೆಯನ್ನು ಹೊಂದಿದ್ದಾರೆ.