
ಈ ಬಾರಿಯ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ನಾಯಕತ್ವ ರೊಹಿತ್ ಹೆಗಲಿಗೇರುವುದು ಉತ್ತಮ ಎಂಬ ಅಭಿಪ್ರಾಯ ದೊಡ್ಡ ಪ್ರಮಾಣದಲ್ಲಿ ಕೇಳಿಬಂದಿದೆ. ಈಗ ಆ ಅಭಿಪ್ರಾಯಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಪ್ರತಿಕ್ರಿಯಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಭಾರತ ಸರಣಿಯನ್ನಾಡಲು ತೆರಳಿದ್ದು ಅಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಪ್ರದರ್ಶನ ನೀಡಿದರೆ ನಾಯಕತ್ವ ವಿಭಜನೆ ಕೂಗನ್ನು ತಳ್ಳಿ ಹಾಕುವುದು ಸುಲಭವಲ್ಲ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಗಮನಿಸಬೇಕಾದ ವಿಚಾರವೆಂದರೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಳ್ಲುತ್ತಿಲ್ಲ. ಆದರೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶೋಯೆಬ್ ಅಖ್ತರ್ ವಿರಾಟ್ ಕೊಹ್ಲಿಗೆ ಸಲಹೆಯೊಂದನ್ನೂ ನೀಡಿದ್ದಾರೆ. ಹೆಚ್ಚಿನ ಹೊರೆಯಿಂದಾಗಿ ವಿರಾಟ್ ಕೊಹ್ಲಿ ಆಯಾಸಗೊಂಡಿದ್ದರೆ ಕನಿಷ್ಟ ಪಕ್ಷ ಚುಟುಕು ಕ್ರಿಕೆಟ್‌ನಲ್ಲಿ ರೊಹಿತ್ ಶರ್ಮಾಗೆ ನಾಯಕತ್ವ ವಹಿಸುವುದು ಉತ್ತಮ ನಿರ್ಧಾರವಾಗಿರಲಿದೆ ಎಂದು ಅಖ್ತರ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರನ್ನು ಶೋಯೆಬ್ ಅಖ್ತರ್ ಶ್ರೇಷ್ಠ ಆಟಗಾರ ಎಂದು ಬಣ್ಣಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಇಡೀ ಕ್ರಿಕೆಟ್ ಲೋಕದ ಕಣ್ಣು ರೊಹಿತ್ ಶರ್ಮಾ ಅವರ ಪ್ರದರ್ಶನದ ಮೇಲೆ ಇರಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ನನಗೆ ತಿಳಿದಂತೆ ವಿರಾಟ್ ತಂಡವನ್ನು ಮುನ್ನಡೆಸಲು ಬಹಳ ಉತ್ಸುಕನಾಗಿದ್ದಾರೆ. ಆತ ಎಷ್ಟು ಆಯಾಸಗೊಂಡಿದ್ದಾನೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಅವರು 2010 ರಿಂದ ನಿರಂತರವಾಗಿ ಆಡುತ್ತಿದ್ದಾರೆ. 70 ಶತಕ ಹಾಗೂ ರನ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಇಂತಾ ಸಂದರ್ಭದಲ್ಲಿ ಆತ ಆಯಾಸಗೊಂಡಿದ್ದರೆ ನಾಯಕತ್ವ ರೋಹಿತ್ ಶರ್ಮಾಗೆ ವಹಿಸುವುದು ಸೂಕ್ತ" ಎಂದು ಶೋಯೆಬ್ ಅಖ್ತರ್ ತಿಳಿಸಿದ್ದಾರೆ.