ಈ ಬಾರಿಯ ವಿಶ್ವಕಪ್ ಟೂರ್ನಿಯ ಮೊದಲಾರ್ಧ ಮುಕ್ತಾಯವಾಗಿದ್ದು ಅಂತಿಮಘಟ್ಟದತ್ತ ಹೆಜ್ಜೆಹಾಕಿತ್ತಿದೆ. ಈ ಹಂತದಲ್ಲಿ ಲೀಗ್ ಹಂತದಿಂದ ಸೆಮಿಫೈನಲ್‌ಗೆ ಪ್ರವೇಶಿಸುವ ಸ್ಪರ್ಧೆ ತೀವ್ರವಾಗಿತ್ತಿದ್ದು ಪೈಪೋಟಿ ಜೋರಾಗಿದೆ. ಈ ಸಂದರ್ಭದಲ್ಲಿ ಒಂದು ತಂಡದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ ಅಸಮಾಧಾನ ವ್ಯಕ್ತಪಡಿಸಿದ್ದು ಆ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ಗೆಲ್ಲಲು ಬಂದಂತೆ ಕಾಣಿಸುತ್ತಿಲ್ಲ ಎಂದಿದ್ದಾರೆ.
ಅಂದಹಾಗೆ ಶ್ರೀಶಾಂತ್ ಕಿಡಿಕಾರಿದ್ದು ಬೇರೆಯಾರ ಬಗ್ಗೆಯೂ ಅಲ್ಲ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ಬಗ್ಗೆ. ಈ ಬಾರಿಯ ವಿಶ್ವಕಪ್ ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತಿರುವ ಇಂಗ್ಲೆಂಡ್ ಸ್ಥಿತಿ ಹೀನಾಯವಾಗಿದ್ದು ಶ್ರೀಲಂಕಾ ವಿರುದ್ಧ ಐದನೇ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಪ್ರದರ್ಶನದ ಬಗ್ಗೆ ಶ್ರೀಶಾಂತ್ ಮಾತನಾಡುತ್ತಾ ಅಸಮಾಧಾನ ಹೊರಹಾಕಿದ್ದಾರೆ.

ಈ ಬಾರಿಯ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡದ ಪೂರ್ವಸಿದ್ಧತೆಯ ಬಗ್ಗೆ ಪ್ರಶ್ನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಶಾಂತ್, ಜೋಸ್ ಬಟ್ಲರ್ ಪಡೆ ತಮ್ಮ ಗೆಲುವಿನ ಹಸಿವನ್ನು ವ್ಯಕ್ತಪಡಿಸುತ್ತಿಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ತಂಡಕ್ಕೆ ಅವರದ್ದೇ ಆದ ನಿರ್ಭೀತ ಕ್ರಿಕೆಟ್ ಶೈಲಿಯ ರುಚಿ ತೋರಿಸಿದ್ದಾರೆ.
"ಇಂಗ್ಲೆಂಡ್ ತಂಡ ಇಲ್ಲಿಗೆ ವಿಶ್ವಕಪ್ ಗೆಲ್ಲಲು ಬಂದಂತೆ ಕಾಣಿಸುತ್ತಿಲ್ಲ. ಮೊದಲ ಪಂದ್ಯದಿಂದಲೇ ಅವರು ವಿಶ್ವಕಪ್‌ಗೆ ಪೂರಕವಾಗಿ ಸಿದ್ಧತೆ ನಡೆಸಿದಂತೆ ಕಾಣಿಸಲಿಲ್ಲ. ಇನ್ನು ದಕ್ಷಿಣ ಆಫ್ರಿಕಾ ತಮಡ ಪ್ರದರ್ಶಿಸುತ್ತಿರುವ ಆಟಕ್ಕೆ ಮೆಚ್ಚುಗೆ ಸೂಚಿಸಲೇ ಬೇಕು. ಅವರು ಆಕ್ರಮಣಕಾರಿಯಾದ ಪ್ರದರ್ಶನ ನೀಡುತ್ತಿದ್ದಾರೆ. ಅವರು ಆಡುವ ಕೊನೆಯ ಕೆಲ ಓವರ್‌ಗಳಂತೂ ವಿಡಿಯೋ ಗೇಮ್ ರೀತಿಯಿರುತ್ತದೆ. ಎದುರಿಸುವ ಪ್ರತಿಯೊಂದು ಎಸೆತ ಕೂಡ ಬೌಂಡರಿ ಹಾಗೂ ಸಿಕ್ಸರ್‌ಗಳತ್ತ ಅಟ್ಟಲ್ಪಡುತ್ತದೆ" ಎಂದಿದ್ದಾರೆ ಶ್ರೀಶಾಂತ್.
ಇನ್ನು ಈ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ಬರೊಬ್ಬರಿ 229 ರನ್‌ಗಳ ಅಂತರದಿಂದ ಇಂಗ್ಲೆಂಡ್ ತಂಡ ಸೋಲು ಅನುಭವಿಸಿ ಭಾರೀ ಆಘಾತಕ್ಕೆ ಒಳಗಾಗಿತ್ತು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಪ್ರಸ್ತುತ ಕೇವಲ ಒಂದು ಗೆಲುವು ಮಾತ್ರವೇ ಸಾಧಿಸಿದ್ದು ಭಾರೀ ಹಿನ್ನಡೆಯಲ್ಲಿದೆ.
ಶ್ರೀಲಂಕಾ ಎದುರಿಸಲಿದೆ ಇಂಗ್ಲೆಂಡ್
ಇನ್ನು ಇದೀಗ ಇಂಗ್ಲೆಂಡ್ ತಂಡ ಇಂದು(ಅಕ್ಟೋಬರ್ 26) ಶ್ರೀಲಂಕಾ ತಂಡವನ್ನು ಎದುರಿಸಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯವಹಿಸಲಿದೆ. ಎರಡು ತಂಡಗಳ ಸ್ಥಿತಿ ಕೂಡ ಸಮಾನವಾಗಿದ್ದು ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಮುಂದುವರಿಯಲಿದ್ದು ಉಳಿದ ತಂಡಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ಆದರೆ ಸೋತ ತಂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದು ಖಚಿತ.