
ನವದೆಹಲಿ, ಆಗಸ್ಟ್ 21: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಕ್ರಿಕೆಟ್‌ನಿಂದ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಭಾರತದ ವೇಗಿ ಎಸ್ ಶ್ರೀಶಾಂತ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವ ಖುಷಿಯಲ್ಲಿದ್ದಾರೆ. ಅವರ ನಿಶೇಧ ಶಿಕ್ಷೆಯನ್ನು ಕಡಿತಗೊಳಿಸಲಾಗಿದ್ದು, ಮುಂದಿನ ವರ್ಷ ಮುಗಿಯಲಿದೆ.
2013ರ ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸ್ ಆರೋಪದಡಿಯಲ್ಲಿ ಶ್ರೀಶಾಂತ್, ಬಿಸಿಸಿಐನಿಂದ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಶಿಕ್ಷೆಯನ್ನು ಮರು ಪರಿಶೀಲಿಸಿದ ಬಳಿಕ ಬಿಸಿಸಿಐನ ಓಂಬುಡ್ಸ್‌ಮನ್ ಡಿಕೆ ಜೈನ್, ಮಂಗಳವಾರ (ಆಗಸ್ಟ್ 21) ಶಿಕ್ಷೆಯನ್ನು 7 ವರ್ಷಗಳಿಗೆ ಕಡಿತಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಶ್ರೀಶಾಂತ್ 6 ವರ್ಷಗಳ ಕಾಲ ನಿಷೇಧ ಶಿಕ್ಷೆಯನ್ನು ಅನುಭವಿಸಿದ್ದಾಗಿದೆ. ಅಂದರೆ ಶ್ರೀಶಾಂತ್ ಅವರ ವೃತ್ತಿ ಬದುಕಿನ ಪ್ರಮುಖ ಘಟ್ಟವೇ ನಿಷೇಧದ ನಡುವೆ ಕಳೆದು ಹೋಗಿದೆ. ಆದರೂ ಧೃತಿಗೆಡದ ಶ್ರೀಶಾಂತ್ ತಾನು ಮತ್ತೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.
'ನಾನು ಮೊದಲಿನಿಂದಲೂ ಟೆನಿಸ್ ಸ್ಟಾರ್ ಲಿಯಾಂಡರ್ ಪೇಸ್ ಅವರ ದೊಡ್ಡ ಅಭಿಮಾನಿ. ಇಂಥ ವಯಸ್ಸಿನಲ್ಲೂ ಹೇಗಿರಬೇಕು ಅನ್ನೋದನ್ನು ಅವರು ತೋರಿಸಿಕೊಟ್ಟಿದ್ದಾರೆ. ನಾನೂ ಧೃತಿಗೆಡಬಾರದು. 38ರ ಹರೆಯದಲ್ಲಿ ಆಶೀಷ್ ನೆಹ್ರಾ ಕೂಡ ವಿಶ್ವ ಟಿ20ಯಲ್ಲಿ ಆಡಿದ್ದರು. ನನಗಿನ್ನೂ 36ರ ಹರೆಯ,' ಎಂದು ಶ್ರೀಶಾಂತ್ ಕ್ರಿಕೆಟ್‌ಗೆ ವಾಪಸ್ಸಾಗುವ ವಿಶ್ವಾಸದ ವ್ಯಕ್ತಪಡಿಸಿದರು.
42ರ ಹರೆಯದಲ್ಲಿ ಪೇಸ್ ಗ್ರ್ಯಾಂಡ್‌ಸ್ಲ್ಯಾಮ್ ಜಯಿಸಿದ್ದನ್ನು ಸ್ಮರಿಸಿಕೊಂಡಿರುವ ಶ್ರೀಶಾಂತ್, 'ಪೇಸ್, ನೆಹ್ರಾ ಅವರಂತೆ ಸಾಧಿಸಲು ನನಗಿನ್ನೂ ವಯಸ್ಸಿದೆ. ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ,' ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಹೇಳಿಕೊಂಡಿದ್ದಾರೆ. 2020ರ ಸೆಪ್ಟೆಂಬರ್‌ನಲ್ಲಿ ಶ್ರೀಶಾಂತ್ ಮೇಲಿನ ನಿಷೇಧ ಕೊನೆಗೊಳ್ಳಲಿದೆ.