SRH vs MI: IPL ಇತಿಹಾಸದಲ್ಲೇ ಗರಿಷ್ಠ ರನ್ ಕಲೆ ಹಾಕಿದ ಹೈದರಾಬಾದ್: ಎಸ್‌ಆರ್‌ಎಚ್ ಆಟಕ್ಕೆ ಮಕಾಡೆ ಮಲಗಿದ MI
ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಸನ್‌ರೈಸರ್ಸ್ ಹೈದರಾಬಾದ್ ಮುತ್ತಿನ ನಗರಿಯಲ್ಲಿ ಮುತ್ತಿನಂತಹ ಇನ್ನಿಂಗ್ಸ್ ಕಟ್ಟಿತು. ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಬ್ಯಾಟಿಂಗ್ ಮಾಡಿದ ಹೈದರಾಬಾದ್ ಬ್ಯಾಟರ್‌ಗಳು ಮುಂಬೈ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿದರು. ಹಾರ್ದಿಕ್ ಪಾಂಡ್ಯ ಅವರು ಹಾಕಿಕೊಂಡು ಯೋಜನೆಯನ್ನು ಬುಡಮೇಲು ಮಾಡಿದ ಹೈದರಾಬಾದ್ ತಂಡ ಸ್ಫೋಟಕ ಆಟವನ್ನು ಆಡಿತು. ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಕಲೆ ಹಾಕಿದ ದಾಖಲೆಯನ್ನು ಮಾಡಿತು. ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 277 ರನ್ ಸೇರಿಸಿತು.
ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ 2013ರಲ್ಲಿ ಆರ್‌ಸಿಬಿ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿತು. ಆರ್‌ಸಿಬಿ ಮುಂಬೈ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 263 ರನ್ ಸಿಡಿಸಿದ್ದು, ಈ ವರೆಗಿನ ಗರಿಷ್ಠ ಮೊತ್ತವಾಗಿತ್ತು. ಈ ಮೊತ್ತವನ್ನು ಎಸ್‌ಆರ್‌ಎಚ್ ಮೀರಿ ನಿಂತು ಹೊಸ ದಾಖಲೆಗೆ ತನ್ನ ಹೆಸರನ್ನು ನಮೂದಿಸಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ಆಕ್ರಮಣಕಾರಿ ಆಟಕ್ಕೆ ಆರಂಭದಲ್ಲೇ ಮಣೆ ಹಾಕಿತು. ಭರವಸೆಯ ಆಟಗಾರ ಮಯಾಂಕ್ ಅಗರ್‌ವಾಲ್ ಕೇವಲ 11 ರನ್‌ಗಳಿಗೆ ಔಟ್ ಆದರು. ತಂಡ 4 ಓವರ್‌ಗಳಲ್ಲಿ 45 ರನ್ ಸಿಡಿಸಿ ಆರ್ಭಟಿಸಿತು. ಈ ವೇಳೆ ಮಯಾಂಕ್ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಔಟ್ ಆದರು.
ಭರ್ಜರಿ ಜೊತೆಯಾಟ
ಎರಡನೇ ವಿಕೆಟ್‌ಗೆ ಅನುಭವಿ ಆಟಗಾರ ಟ್ರಾವಿಸ್ ಹೆಡ್ ಜೊತೆಗೂಡಿದ ಅಭಿಷೇಕ್ ಶರ್ಮಾ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮುಂಬೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಮುಂಬೈ ತಂಡದ ಸ್ಟಾರ್ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿದ ಹೈದರಾಬಾದ್ ಜೋಡಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಟ್ರಾವಿಸ್ ಹೆಡ್ ಕೇವಲ 24 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 62 ರನ್ ಸಿಡಿಸಿ ಔಟ್ ಆದರು. ಇವರು ಎಸ್‌ಆರ್‌ಎಚ್ ಪರ ವೇಗವಾಗಿ ಅರ್ಧಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.

ವೇಗದ ಅರ್ಧಶತಕ
ಅಭಿಷೇಕ್ ಶರ್ಮಾ ಸಹ ತಮ್ಮಲ್ಲಿ ಬ್ಯಾಟಿಂಗ್ ಮಾಡುವ ಕ್ಷಮತೆಯಿದೆ ಎಂದು ಸಾಬೀತು ಮಾಡಿದರು. ಅಭಿಷೇಕ್ ತಮ್ಮ ರೋಲ್ ಮಾಡಲ್ ಆಗಿರುವ ಯುವರಾಜ್ ಸಿಂಗ್ ಅವರಂತೆ ಬ್ಯಾಟ್ ಮಾಡಿದ ಇವರು ಕೇವಲ 23 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಹಾಯದಿಂದ 63 ರನ್ ಬಾರಿಸಿದರು. ಇವರು ಟ್ರಾವಿಸ್ ಹೆಡ್ ಅವರ ವೇಗದ ಅರ್ಧಶತಕ ದಾಖಲೆಯನ್ನು ಮುರಿದರು. ಇವರು 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು.
ಇವರು ಔಟ್ ಆಗುತ್ತಿದ್ದಂತೆ ಮಾಜಿ ನಾಯಕ ಏಡೆನ್ ಮಾರ್ಕ್ರಾಮ್ ಹಾಗೂ ಹೆನ್ರಿಚ್ ಕ್ಲಾಸೇನ್ ಜೋಡಿ ಸಹ ಟಾಪ್ ಆರ್ಡರ್ ಗಳು ಹಾಕಿಕೊಟ್ಟ ಬುನಾದಿಯ ಮೇಲೆ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಮುಂಬೈ ಇಂಡಿಯನ್ಸ್ ವಿಫಲವಾಯಿತು.ಹೆನ್ರಿಚ್ ಕ್ಲಾಸೇನ್ 34 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್ ಸಹಾಯದಿಂದ 80 ರನ್ ಬಾರಿಸಿದರು.
200+ ಸ್ಟ್ರೈಕ್ ರೇಟ್
ಎಸ್‌ಆರ್‌ಎಚ್ ತಂಡದ ಪರ ಮೂವರು ಬ್ಯಾಟ್ಸ್‌ಮನ್‌ಗಳ ಸ್ಟ್ರೈಕ್ ರೇಟ್ ನೋಡಿದರೆ, ಮುಂಬೈ ಇಂಡಿಯನ್ಸ್ ಬೌಲರ್‌ಗಳ ಸ್ಥಿತಿ ಅರ್ಥವಾಗುತ್ತದೆ. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಟ್ರಾವಿಸ್ ಹೆಡ್ 258.33, ಅನ್ ಕ್ಯಾಪ್ಡ್ ಪ್ಲೇಯರ್ ಅಭಿಷೇಕ್ ಶರ್ಮಾ 273.91, ಹೆನ್ರಿಚ್ ಕ್ಲಾಸೇನ್ 235.29 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ ಗಮನ ಸೆಳೆದರು.
ಮುಂಬೈ ತಂಡದ ಜಸ್ಪ್ರಿತ್ ಬುಮ್ರಾ ಮಾತ್ರ ಸಿಂಗಲ್ ಡಿಜಿಟ್ ಎಕನಾಮಿಯನ್ನು ಹೊಂದಿದ್ದರು. ಉಳಿದ ಬೌಲರ್‌ಗಳ ಮನಬಂದಂತೆ ರನ್‌ಗಳು ನೀಡಿ ಕೈ ಸುಟ್ಟುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications