SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
ಮುತ್ತಿನ ನಗರಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟರ್‌ಗಳು ತವರಿನ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿದರು. ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ವರ್ಮಾ ಅವರ ಬಿರುಗಾಳಿಯ ಆಟಕ್ಕೆ ಮುಂಬೈ ಇಂಡಿಯನ್ಸ್ ಕೊಚ್ಚಿ ಹೋಗಿದೆ. ಟೂರ್ನಿಯಲ್ಲಿ ಎಸ್‌ಆರ್‌ಎಚ್‌ಗೆ ಇದು ಮೊದಲ ಜಯ. ಐಪಿಎಲ್ 2024ರಲ್ಲಿ ಹಾರ್ದಿಕ್ ಪಾಂಡ್ಯ ಅವರ ಮುಂಬೈ ಇಂಡಿಯನ್ಸ್ ಎರಡನೇ ಸೋಲು ಕಂಡಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 277 ರನ್ ಸೇರಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ದಾಖಲಿ ನಿರ್ಮಿಸಿತು. 2013ರಲ್ಲಿ ಆರ್‌ಸಿಬಿ ನಿರ್ಮಿಸಿದ್ದ ದಾಖಲೆ ಎಸ್ಆರ್‌ಎಚ್ ಬ್ಯಾಟರ್‌ಗಳ ಆಟಕ್ಕೆ ಧೂಳಿ ಪಟವಾಯಿತು. ಬೃಹತ್ ಮೊತ್ತ ಚೇಸ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 246 ರನ್ ಸೇರಿಸಿ ಸೋಲು ಕಂಡಿತು.

ಅಬ್ಬರದ ಆರಂಭ
ಎಸ್‌ಆರ್‌ಎಚ್ ತಂಡದ ಆರಂಭ ಭರ್ಜರಿಯಾಗಿತ್ತು. ತಂಡದ ಸ್ಟಾರ್ ಆಟಗಾರರು ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಪರಿಣಾಮ ಮುಂಬೈ ಬೌಲರ್‌ಗಳು ಬೆಚ್ಚಿದರು. ಮುಂಬೈ ತಂಡದ ಸ್ಟಾರ್ ಬೌಲರ್‌ಗಳು ಎಸ್‌ಆರ್‌ಎಚ್ ತಂಡದ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಸಂಪೂರ್ಣ ವಿಫಲರಾದರು. ಟಾಸ್ ಸೋತರೂ ಅಬ್ಬರದ ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ನಾಯಕನ ನಿರ್ಧಾರವನ್ನು ತಪ್ಪೆಂದು ತಿಳಿಸಿದರು.
ಮಯಾಂಕ್ ಅಗರ್‌ವಾಲ್ 11 ರನ್‌ಗಳಿಗೆ ಆಟ ಮುಗಿಸಿದರು. ಎರಡನೇ ವಿಕೆಟ್‌ಗೆ ಟ್ರಾವಿಸ್ ಹೆಡ್ ಅಭಿಷೇಕ್ ಶರ್ಮಾ ಜೋಡಿ 23 ಎಸೆತಗಳಲ್ಲಿ 68 ರನ್ ಸೇರಿಸಿತು. ಟ್ರಾವಿಸ್ ಹೆಡ್ 9 ಬೌಂಡರಿ, 3 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿ ಔಟ್ ಆದರು. ಟ್ರಾವಿಸ್ ಹೆಡ್ 258.33ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಬಾಚಿದರು. ಅಭಿಷೇಕ್ ಶರ್ಮಾ ಕೇವಲ 16 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಇವರು 23 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಹಾಯದಿಂದ 63 ರನ್ ಬಾರಿಸಿದರು. ಇವರ ಸ್ಟ್ರೈಕ್ ರೇಟ್ 273.91 ಆಗಿತ್ತು.

ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟ
ನಾಲ್ಕನೇ ವಿಕೆಟ್‌ಗೆ ಮಾಜಿ ನಾಯಕ ಏಡೆನ್ ಮಾರ್ಕ್ರಾಮ್ ಹಾಗೂ ಹೆನ್ರಿಚ್ ಕ್ಲಾಸೆನ್ ಜೋಡಿ ಅಬ್ಬರದ ಬ್ಯಾಟಿಂಗ್ ನಡೆಸಿತು. ಈ ಜೋಡಿ 55 ಎಸೆತಗಳಲ್ಲಿ ಅಜೇಯ 116 ರನ್ ಸೇರಿಸಿ ಅಬ್ಬರಿಸಿತು. ಕ್ಲಾಸೇನ್ ಅಜೇಯ 80 ರನ್‌ಗಳನ್ನು 235.29 ಸ್ಟ್ರೈಕ್ ರೇಟ್‌ನಲ್ಲಿ ಕಲೆ ಹಾಕಿದರು. ಇವರ ಮನಮೋಹಕ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ, 7 ಸಿಕ್ಸರ್ ಸೇರಿವೆ. ಇನ್ನು ಮಾಜಿ ನಾಯಕ ಮಾರ್ಕ್ರಾಮ್ ಅಜೇಯ 42 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಉತ್ತಮ ಆರಂಭ
ಸವಾಲಿನ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ 20 ಎಸೆತಗಳಲ್ಲಿ 56 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಇಶಾಂತ್ ಶರ್ಮಾ 34 ರನ್‌ಗಳಿಗೆ ಆಟ ಮುಗಿಸಿದರು. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ 12 ಎಸೆತಗಳಲ್ಲಿ 26 ರನ್ ಸಿಡಿಸಿ ಔಟ್ ಆದರು.

84 ರನ್ ಜೊತೆಯಾಟ
ಮೂರನೇ ವಿಕೆಟ್‌ಗೆ ನಮನ್ ಧೀರ್ ಹಾಗೂ ತಿಲಕ್ ವರ್ಮಾ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಅಲ್ಲದೆ 37 ಎಸೆತಗಳಲ್ಲಿ 84 ರನ್ ಸೇರಿಸಿತು. ನಮನ್ ಧೀರ್ 214.28ರ ಸ್ಟ್ರೈಕ್ ರೇಟ್‌ನಲ್ಲಿ 30 ರನ್ ಸಿಡಿಸಿ ಔಟ್ ಆದರು. ಉಳಿದಂತೆ ಮುಂಬೈ ಇಂಡಿಯನ್ಸ್ ಪರ ಉತ್ತಮ ಜೊತೆಯಾಟಗಳು ಬಾರಲಿಲ್ಲ.
ತಿಲಕ್ ವರ್ಮಾ 34 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ ಸಹಾಯದಿಂದ 64 ರನ್ ಬಾರಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ 24 ರನ್‌ಗಳಿಗೆ ಆಟ ಮುಗಿಸಿದರು. ಟೀಮ್ ಡೇವಿಡ್ ಅಜೇಯ 42, ರೊಮಾರಿಯೋ ಶೆಫರ್ಡ್ 15 ರನ್ ಸಿಡಿಸಿದರು. ಮುಂಬೈ 31 ರನ್‌ಗಳಿಂದ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು.
ಎಸ್‌ಆರ್‌ಎಚ್ ತಂಡದ ಪರ ಪ್ಯಾಟ್ ಕಮಿನ್ಸ್ ಹಾಗೂ ಜಯದೇವ್ ಉನಾದ್ಕಟ್ ತಲಾ ಎರಡು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications