ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಎಲ್ಲರ ಆಕರ್ಷಣೆಯನ್ನು ಕದಿಯಲಿದೆ. ಇದಕ್ಕೂ ಮೊದಲು ಹಲವು ದೇಶಗಳು ಟೆಸ್ಟ್, ಏಕದಿನ, ಟಿ20 ಸರಣಿಗಳನ್ನು ಆಡುತ್ತಿವೆ. ಭಾರತ ಸಹ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಈಗ ಟಿ20 ಸರಣಿಗಳನ್ನು ಆಡುತ್ತಿದೆ. ಈ ಸರಣಿಯ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದೇ ವೇಳೆ ಆಸ್ಟ್ರೇಲಿಯಾ, ಶ್ರೀಲಂಕಾ ಪ್ರವಾಸವನ್ನು ಕೈ ಗೊಳ್ಳಲಿದೆ. ಈ ಎರಡು ದೇಶಗಳ ನಡುವೆ ಟೆಸ್ಟ್ ಹಾಗೂ ಎರಡು ಏಕದಿನ ಪಂದ್ಯಗಳ ಸರಣಿಯನ್ನು ಆಡಲಾಗುತ್ತದೆ.
ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಅರ್ಹತೆ ಪಡೆದಿರುವ ಆಸ್ಟ್ರೇಲಿಯಾ, ತನ್ನ ಈ ಚಕ್ರದ ಕೊನೆಯ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಲಂಕಾ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಸರಣಿಯಲ್ಲಿ ನೀಡುತ್ತಿರುವ ಪ್ರದರ್ಶನ ಕುತೂಹಲ ಹೆಚ್ಚಿಸಿದೆ. ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಲಂಕಾ ತಂಡವನ್ನು ಪ್ರಕಟಿಸಲಾಗಿದೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಜ.29ರಿಂದ ಉಭಯ ದೇಶಗಳ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಗೆ ಈಗ ಶ್ರೀಲಂಕಾ ತನ್ನ ತಂಡವನ್ನು ಪ್ರಕಟಿಸಿದೆ. ಲಂಕಾ ಟೆಸ್ಟ್ ತಂಡವನ್ನು ಧನಂಜಯ ಡಿ ಸಿಲ್ವಾ ಮುನ್ನಡೆಸಲಿದ್ದಾರೆ. ಈ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಜನವರಿ 29 ರಿಂದ ಗಾಲೆ ಮೈದಾನದಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಪಂದ್ಯವು ಫೆಬ್ರವರಿ 6 ರಿಂದ ಆರಂಭವಾಗಲಿದೆ. ಆ ಬಳಿಕ ಏಕದಿನ ಸರಣಿ ಆರಂಭವಾಗಲಿದೆ.
ಶ್ರೀಲಂಕಾದ ಈ ಟೆಸ್ಟ್ ತಂಡದಲ್ಲಿ ಇಬ್ಬರು ಹೊಸ ಆಟಗಾರರಾದ ಲಹಿರು ಉದಾನ ಮತ್ತು ಸೋನಾಲ್ ದಿನುಶಾ ಸ್ಥಾನ ಪಡೆದಿದ್ದು, ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಅವಕಾಶವನ್ನೂ ಅವರು ಪಡೆಯಲಿದ್ದಾರೆ. ವಾರ್ನ್-ಮುರಳಿ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಈಗಾಗಲೇ ಘೋಷಿಸಲಾಗಿದ್ದು, 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಆಸೀಸ್ ಸ್ಮಿತ್‌ಗೆ ಪಟ್ಟವನ್ನು ಕಟ್ಟಿದೆ.
ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ಫೈನಲ್ ಪ್ರವೇಶಿಸಿವೆ. ಶ್ರೀಲಂಕಾ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಲಂಕಾ ಆಡಿದ 11 ಪಂದ್ಯಗಳಲ್ಲಿ 5 ಜಯ ಹಾಗೂ 6 ಸೋಲುಗಳನ್ನು ಕಂಡಿದ್ದು, ಗೆಲುವಿನ ಶೇಕಡಾ ವಾರು 45.45 ಆಗಿದೆ.
ಧನಂಜಯ ಡಿ ಸಿಲ್ವಾ (ನಾಯಕ), ದಿಮುತ್ ಕರುಣರತ್ನೆ, ಪಾತುಮ್ ನಿಸ್ಸಂಕ, ಓಷದ ಫೆರ್ನಾಂಡೊ, ಲಹಿರು ಉದಾನ, ದಿನೇಶ್ ಚಾಂಡಿಮಲ್, ಏಂಜೆಲೊ ಮ್ಯಾಥ್ಯೂಸ್, ಕಾಮಿಂಡು ಮೆಂಡಿಸ್, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಸೋನಾಲ್ ದಿನುಷಾ, ಪ್ರಭಾತ್ ಜಯಸೂರ್ಯ, ಜೆಫ್ರಿ ವಂಡರ್ಸೆ, ನಿಶಾನ್ ಪೀರಿಸ್, ಅಸಿತಾ ಫೆರ್ನಾಂಡೊ, ವಿಶ್ವ ಫರ್ನಾಂಡೊ, ಲಹಿರು ಕುಮಾರ, ಮಿಲನ್ ಆರ್.