
ನ್ಯೂಜಿಲೆಂಡ್ ವಿರುದ್ಧದ ಸೋಲಿನ ನಂತರ ಮಾತನಾಡಿರುವ ಶ್ರೀಲಂಕಾ ನಾಯಕ ದಸುನ್ ಶನಕ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಪ್ರವೇಶಿಸುವ ಅವಕಾಶ ಇನ್ನೂ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಸೂಪರ್-12 ಹಂತದಲ್ಲಿ ಕೇವಲ 102 ರನ್‌ಗಳಿಗೆ ಆಲೌಟ್ ಆಗುವ ಮೂಲಕ 65 ರನ್‌ಗಳ ಹೀನಾಯ ಸೋಲನುಭವಿಸಿದೆ. ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ಮಾರಕ ದಾಳಿಗೆ ಶ್ರೀಲಂಕಾ ಬ್ಯಾಟರ್ ಗಳು ತರಗೆಲೆಗಳಂತೆ ಉದುರಿದರು.
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ತಂಡದ ಪ್ರದರ್ಶನದ ಬಗ್ಗೆ ನಿರಾಸೆ ವ್ಯಕ್ತಪಡಿಸಿದರು. ಆದರೂ, ಶ್ರೀಲಂಕಾ ತಂಡಕ್ಕೆ ಸೆಮಿಫೈನಲ್ ತಲುಪಲು ಇನ್ನೂ ಅವಕಾಶ ಇದೆ ಎಂದು ಅವರು ಹೇಳಿದ್ದಾರೆ. ಸೂಪರ್ 12 ಹಂತದಲ್ಲಿ ಶ್ರೀಲಂಕಾ ಇನ್ನೂ ಎರಡು ಪಂದ್ಯಗಳನ್ನಾಡಲಿದ್ದು, ಎರಡೂ ಪಂದ್ಯಗಳಲ್ಲಿ ಜಯಗಳಿಸಲು ತಂತ್ರ ರೂಪಿಸುವುದಾಗಿ ಹೇಳಿದ್ದಾರೆ.
ಶ್ರೀಲಂಕಾ ಮೊದಲ 10 ಓವರ್‌ಗಳಲ್ಲಿ ತಮ್ಮ ಸ್ಪಿನ್ ದಾಳಿಯೊಂದಿಗೆ ನ್ಯೂಜಿಲೆಂಡ್‌ನ ಮೇಲೆ ಪ್ರಾಬಲ್ಯ ಸಾಧಿಸಿತು, ನ್ಯೂಜಿಲೆಂಡ್ ಅಗ್ರ ಕ್ರಮಾಂಕದ ಆಟಗಾರರನ್ನು ಬೇಗನೆ ಔಟ್ ಮಾಡಿದರು. ಆದರೆ, ಗ್ಲೆನ್ ಫಿಲಿಪ್ಸ್ ಅಮೋಘ ಶತಕ ಗಳಿಸುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಆಸರೆಯಾದರು. ಅವರು 104 ರನ್ ಗಳಿಸಿ ಔಟಾದರು. ಅಂತಿಮವಾಗಿ ನ್ಯೂಜಿಲೆಂಟ್ 167 ರನ್ ಗಳಿಸಿತು.

ನಾವು ಉತ್ತಮ ಪ್ರದರ್ಶನ ನೀಡಲಿಲ್ಲ ಎಂದ ಶನಕ
"ನಾವು ವಿಶೇಷವಾಗಿ ಮೊದಲ 10 ಓವರ್‌ಗಳಲ್ಲಿ ಉತ್ತಮವಾಗಿ ಪ್ರಾರಂಭಿಸಿದೆವು. ಆದರೆ ಅತ್ಯುತ್ತಮವಾದ ಇನ್ನಿಂಗ್ಸ್ ಆಡಿದ ಗ್ಲೆನ್ ಫಿಲಿಪ್ಸ್‌ಗೆ ಶ್ರೇಯಸ್ಸು ಸಲ್ಲುತ್ತದೆ" ಎಂದು ಶನಕ ಪಂದ್ಯದ ನಂತರ ಹೇಳಿದರು.
ಈ ಬಾರಿ ವಿಶ್ವಕಪ್‌ನಲ್ಲಿ ಶ್ರೀಲಂಕಾ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೋಲನುಭವಿಸಿದರು. ಆದರೆ ಪಂದ್ಯಾವಳಿಯ ಮುಖ್ಯ ಸುತ್ತಿಗೆ ಪ್ರವೇಶಿಸಲು ಉಳಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರು. ನಂತರ ಸೂಪರ್-12 ಹಂತದಲ್ಲಿ, ಅವರು ಐರ್ಲೆಂಡ್ ಅನ್ನು ಸೋಲಿಸಿದರು ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ದಸುನ್ ಶನಕ, ಶ್ರೀಲಂಕಾ ಸೋಲಿಗೆ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಕಾರಣ ಎಂದು ದೂಷಿಸಿದರು. ಸೆಮಿಫೈನಲ್‌ನಲ್ಲಿ ಅವರ ಅವಕಾಶಗಳ ಬಗ್ಗೆ ಭರವಸೆಯಲ್ಲಿದ್ದರು.
"ನಾವು ಕೆಲವು ಕ್ಯಾಚ್‌ಗಳನ್ನು ಬಿಟ್ಟೆವು. ಅತ್ಯಂತ ಉತ್ತಮ ಬೌಲಿಂಗ್ ಪಡೆಯನ್ನು ಹೊಂದಿರುವ ನ್ಯೂಜಿಲೆಂಡ್ ವಿರುದ್ಧ 160 ರನ್ ಚೇಸ್ ಮಾಡುವುದು ಸುಲಭವಲ್ಲ. ಬೌಲ್ಟ್ ಮತ್ತು ಸೌಥಿ ಚೆನ್ನಾಗಿ ಬೌಲ್ ಮಾಡಿದರು. ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದು ನಮಗೆ ಮುಳುವಾಯಿತು. ಉಳಿದ ಎರಡೂ ಪಂದ್ಯಗಳಲ್ಲಿ ನಾವು ಜಯ ಸಾಧಿಸಿದರೆ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಇದೆ" ಎಂದು ಶನಕ ಹೇಳಿದ್ದಾರೆ.