
ಕೊಲಂಬೋ, ಜುಲೈ 23: ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 199 ರನ್ ಭರ್ಜರಿ ಜಯದೊಂದಿಗೆ 2-0 ಅಂತರದಿಂದ ಸರಣಿ ವಶವಾಗಿಸಿಕೊಂಡಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಶ್ರೀಲಂಕಾ, ದನುಷ್ಕ ಗುಣತಿಲ 57 (107), ದಿಮುತ್ ಕರುಣರತ್ನೆ 53 (110), ಧನಂಜಯ ಡೆಸಿಲ್ವಾ 60 (109) ರನ್ ನೆರವಿನೊಂದಿಗೆ 104.1 ಓವರ್ ಗೆ ಎಲ್ಲಾ ವಿಕೆಟ್ ಕಳೆದು ಒಟ್ಟು 338 ರನ್ ಕಲೆ ಹಾಕಿತ್ತು.
ಚೇಸಿಂಗ್ ಗೆ ಇಳಿದ ದಕ್ಷಿಣ ಆಫ್ರಿಕಾದಿಂದ ಫಾ ಡು ಪ್ಲೆಸಿಸ್ 48 (51), ಕ್ವಿಂಟನ್ ಡಿ ಕಾಕ್ 32 (31) ರನ್ ಬಾರಿಸಿದ್ದು ಬಿಟ್ಟರೆ ಉಳಿದ ಆಟಗಾರರರಿಂದ ತಂಡಕ್ಕೆ ರನ್ ಬೆಂಬಲ ದೊರೆಯದಾಯಿತು. ಜೊತೆಗೆ ಅಖಿಲ ದನಂಜಯ (52 ರನ್ ಗೆ 5 ವಿಕೆಟ್), ದಿಲ್ರುವಾನ್ ಪೆರೆರಾ (40 ರನ್ ಗೆ 4 ವಿಕೆಟ್) ಮಾರಕ ದಾಳಿ ಸೌತಾಫ್ರಿಕಾನ್ನರನ್ನು ಬರೀ 124 ರನ್ನಿಗೆ ಕಟ್ಟಿ ಹಾಕಿತು.
ಮೊದಲ ಇನ್ನಿಂಗ್ಸ್ ನಲ್ಲಿ 34.5 ಓವರ್ ಗೆ 124 ರನ್ ಪೇರಿಸಿದ್ದ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ಎದುರು ಬೃಹತ್ 214 ರನ್ ನಿಂದ ಸರಣಿಯಲ್ಲಿ 0-1ರ ಹಿನ್ನಡೆ ಅನುಭವಿಸಿತು. ಎರಡನೇ ಟೆಸ್ಟ ನಲ್ಲೂ ಸೌತಾಫ್ರಿಕಾಕ್ಕೆ ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ತಂಡವು ದನುಷ್ಕ 68 (68), ದಿಮುತ್ ಕರುಣರತ್ನೆ 85 (136), ಏಜೆಲೋ ಮ್ಯಾಥ್ಯೂ 71 (147) ರನ್ ನೆರವಿನೊಂದಿಗೆ 81 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 275 ರನ್ ಪೇರಿಸಿತು. 490 ರನ್ ಗುರಿ ಬೆನ್ನಟ್ಟಿದ ಸೌತಾಫ್ರಿಕಾ ಥೆಯುನಿಸ್ ಡಿ ಬ್ರುಯಿನ್ 101 (232), ಟೆಂಬ ಬವುಮ 63 (98) ರನ್ ಪೇರಿಸಿ 86.5 ಓವರ್ ಗೆ ಎಲ್ಲಾ ವಿಕೆಟ್ ಕಳೆದು 290 ರನ್ ಪೇರಿಸಿ 199 ರನ್ ನಿಂದ ಶ್ರೀಲಂಕಾಕ್ಕೆ ಶರಣಾಯಿತು.