ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎರಡನೇ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್ ಸೋತರೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 220 ರನ್ ಸೇರಿಸಿತು. ಈ ವೇಳೆ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಅಮೋಘ ಬ್ಯಾಟಿಂಗ್ ನಡೆಸಿದರು. ತಮ್ಮ ತವರು ಮೈದಾನದಲ್ಲಿ ಅಜಿಂಕ್ಯ ಅರ್ಧಶತಕ ಬಾರಿಸಿ ಮಿಂಚಿದರು. ಈ ಮೂಲಕ ಗೌತಮ್ ಗಂಭೀರ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಕೆಕೆಆರ್ ತಂಡದ ಆರಂಭಿಕರಾದ ಫಿನ್ ಅಲೆನ್ ಹಾಗೂ ನಾಯಕ ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 5.2 ಓವರ್‌ಗಳಲ್ಲಿ 69 ರನ್ ಸೇರಿಸಿತು. ಈ ವೇಳೆ ಫಿನ್ ಅಲೆನ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.

ನಾಯಕ ಅಜಿಂಕ್ಯ ರಹಾನೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 40 ಎಸೆತಗಳಲ್ಲಿ 167ರ ಸ್ಟ್ರೈಕ್ ರೇಟ್‌ನಲ್ಲಿ 67 ರನ್ ಸಿಡಿಸಿದರು. ಈ ವೇಳೆ 3 ಬೌಂಡರಿ, 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರಹಾನೆ ತಮ್ಮ ಅಮೋಘ ಇನಿಂಗ್ಸ್‌ನಲ್ಲಿ ಬೌಂಡರಿಗಳಿಗಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದು ವಿಶೇಷವಾಗಿತ್ತು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಜಿಂಕ್ಯ ರಹಾನೆ 65 ರನ್ ಬಾರಿಸುತ್ತಿದ್ದಂತೆ ದೊಡ್ಡ ದಾಖಲೆ ಬರೆದರು. ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ನಾಯಕನಾಗಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ರಹಾನೆ ಮಾಡಿದರು. ಇದಕ್ಕೂ ಮೊದಲು ಈ ದಾಖಲೆ ಗೌತಮ್ ಗಂಭೀರ್ ಅವರ ಹೆಸರಿನಲ್ಲಿತ್ತು. ಗಂಭೀರ್ 2016ರಲ್ಲಿ 64 ರನ್ ಸಿಡಿಸಿದ್ದರು. ಈಗ ಈ ದಾಖಲೆ ರಹಾನೆ ತಮ್ಮ ಹೆಸರನ್ನು ನಮೂದಿಸಿದರು.
ಮಧ್ಯಮ ಕ್ರಮಾಂಕದ ಅಂಗ್‌ಕ್ರಿಶ್ ರಘುವಂಶಿ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು 29 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿ ಔಟ್ ಆದರು. ರಿಂಕು ಸಿಂಗ್ ಅಜೇಯ 33 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್ ಕಲೆ ಹಾಕಿತು.
37 ವರ್ಷದ ಅಜಿಂಕ್ಯ ರಹಾನೆ ಅವರು ಭಾರತ ಟೆಸ್ಟ್ ತಂಡವನ್ನು ಮತ್ತೆ ಸೇರುವ ಕನಸು ಕಾಣುತ್ತಿದ್ದಾರೆ. ಇವರು ಭಾರತದ ಪರ 85 ಟೆಸ್ಟ್, 90 ಏಕದಿನ, 20 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲಿ ರಹಾನೆ 199 ಪಂದ್ಯಗಳನ್ನು ಆಡಿದ್ದು, 30ರ ಸರಾಸರಿಯಲ್ಲಿ 5099 ರನ್ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 34 ಅರ್ಧಶತಕ ಬಾರಿಸಿದ್ದಾರೆ.