
ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನೂತನ ನಾಯಕನನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಘೋಷಣೆ ಮಾಡಿದೆ. ನಿರೀಕ್ಷೆಯಂತೆಯೇ ಬೆನ್ ಸ್ಟೋಕ್ಸ್‌ಗೆ ಟೆಸ್ಟ್ ತಂಡದ ನಾಯಕತ್ವದ ಜವಾಬ್ಧಾರಿ ದೊರೆತಿದೆ. ಹೀಗಾಗಿ ಮುಂದಿನ ಸರಣಿಯಿಂದ ಟೆಸ್ಟ್ ತಂಡವನ್ನು ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ.
ಈ ಹೊಸ ಜವಾಬ್ಧಾರಿ ದೊರೆತ ಬಳಿಕ ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ ನೀಡಿದ್ದಾರೆ. "ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸಲು ಸಿಕ್ಕ ಅವಕಾಶವನ್ನು ಗೌರವ ಎಂದು ನಾನು ಭಾವಿಸುತ್ತೇನೆ. ಇದು ನಿಜಕ್ಕೂ ದೊಡ್ಡ ಅವಕಾಶವಾಗಿದೆ. ಮುಂದಿನ ಬೇಸಿಗೆಯಲ್ಲಿ ಟೆಸ್ಟ್ ಕ್ರಿಕೆಟ್ ಆರಂಭವಾಗುವುದನ್ನು ನಾನು ಕಾಯುತ್ತಿದ್ದೇನೆ" ಎಂದು ಬೆನ್ ಸ್ಟೋಕ್ಸ್ ಹೇಳಿಕೆ ನೀಡಿದ್ದಾರೆ.
"ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ನೀಡಿದ ಸೇವೆಗಾಗಿ ಜೋ ರೂಟ್‌ಗೆ ನಾನು ಧನ್ಯವಾದವನ್ನು ಸಲ್ಲಿಸುತ್ತೇನೆ. ಆತ ಯಾವಾಗಲೂ ಕ್ರಿಕೆಟ್‌ನ ಶ್ರೇಷ್ಠ ರಾಯಭಾರಿಯಾಗಿ ವಿಶ್ವದಲ್ಲಿ ಗುರುತಿಸಿಕೊಳ್ಳುತ್ತಾರೆ. ನಾನು ನಾಯಕನಾಗಿ ಬೆಳೆಯಲು ಜೋ ರೂಟ್ ಪಾತ್ರ ಬಹಳಷ್ಟು ದೊಡ್ಡದಿದೆ. ಈ ವಿಚಾರದಲ್ಲಿ ಜೋ ರೂಟ್ ಮುಂದೆಯೂ ನನಗೆ ಯಾವಾಗಲೂ ದೊಡ್ಡ ಪಾತ್ರವನ್ನು ನಿಭಾಯಿಸಲಿದ್ದಾರೆ" ಎಂದಿದ್ದಾರೆ ಬೆನ್ ಸ್ಟೋಕ್ಸ್.
ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಜೋ ರೂಟ್ ಈ ತಿಂಗಳ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ನ ನಾಯಕತ್ವವನ್ನು ತೊರೆಯುವ ನಿರ್ಧಾರ ಪ್ರಕಟಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಆಶಸ್ ಟೆಸ್ಟ್ ಸರಣಿ ಸೇರಿದಂತೆ ಇತ್ತೀಚೆಗೆ ಟೆಸ್ಟ್ ಮಾದರಿಯಲ್ಲಿ ಇಂಗ್ಲೆಂಡ್ ತಂಡ ಸತತವಾಗಿ ವೈಫಲ್ಯ ಅನುಭವಿಸಿದ ಬಳಿಕ ಜೋ ರೂಟ್ ನಾಯಕತ್ವದಿಂದ ಕೆಳಕ್ಕಿಳಿಯಬೇಕು ಎಂಬ ಕೂಡ ಜೋರಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜೋ ರೂಟ್ ತಮ್ಮ ಸ್ಥಾನವನ್ನು ತ್ಯಜಿಸಿದ್ದರು.
ಬೆನ್ ಸ್ಟೋಕ್ಸ್ 2013ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಇಂಗ್ಲೆಂಡ್ ಪರವಾಗಿ 79 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 2017ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದರು. ಜೋ ರೂಟ್ ಅಲಭ್ಯತೆಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಅನುಭವ ಕೂಡ ಹೊಂದಿದ್ದಾರೆ ಬೆನ್ ಸ್ಟೋಕ್ಸ್. ಇದೀಗ ಪೂರ್ಣ ಪ್ರಮಾಣದ ನಾಯಕನಾಗುವ ಮೂಲಕ ಇಂಗ್ಲೆಂಡ್ ಟೆಸ್ಟ್ ತಂಡದ 81ನೇ ನಾಯಕ ಎನಿಸಿಕೊಂಡಿದ್ದಾರೆ.
ಕೈ ಬೆರಳಿನ ಗಾಯ ಹಾಗೂ ಮಾನಸಿಕ ಆರೋಗ್ಯದ ಕಾಣವನ್ನು ಮುಂದಿಟ್ಟು ಬೆನ್ ಸ್ಟೋಕ್ಸ್ ಕಳೆದ ಕೆಲ ತಿಂಗಳುಗಳಿಂದ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರವುಳಿದಿದ್ದರು. ಈ ಬಾರಿಯ ಐಪಿಎಲ್‌ನಿಂದಲೂ ಸ್ಟೋಕ್ಸ್ ಹೊರಗುಳಿದಿದ್ದಾರೆ. ಇದೀಗ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸಲು ಪೂರ್ಣ ಪ್ರಮಾಣದಲ್ಲಿ ಬೆನ್ ಸ್ಟೋಕ್ಸ್ ಸಜ್ಜಾಗಿದ್ದಾರೆ.