
ನವದೆಹಲಿ: ಇದೇ ತಿಂಗಳು ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಕುತೂಹಲಕಾರಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್‌ನಲ್ಲಿ ಜೂನ್ 18ರಿಂದ 22ರ ವರೆಗೆ WTC ಫೈನಲ್ ಪಂದ್ಯ ನಡೆಯಲಿದೆ. 2019ರಿಂದ ಆರಂಭಗೊಂಡಿರುವ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯ ಫೈನಲ್ ಪಂದ್ಯವಿದು.
ನ್ಯೂಜಿಲೆಂಡ್-ಭಾರತ ಎರಡೂ ಬಲಿಷ್ಠ ತಂಡಗಳೇ. ಹೀಗಾಗಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ಸ್ ಯಾರಾಗಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ. ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ವಿರಾಟ್ ಕೊಹ್ಲಿ ಪಡೆ ಸೌತಾಂಪ್ಟನ್‌ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ಮೊದಲು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಿ ಬಳಿಕ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಆವೃತ್ತಿ ಮುಂದೂಡಲ್ಪಟ್ಟ ಬಳಿಕ ಭಾರತೀಯ ಆಟಗಾರರ ಪಾಲ್ಗೊಳ್ಳುತ್ತಿರುವ ಮೊದಲ ಕ್ರಿಕೆಟ್ ಟೂರ್ನಿಯಿದು. ಅಭಿಮಾನಿಗಳು ಕಾಯುತ್ತಿರುವ ವರ್ಲ್ಡ್ ಟೆಸ್ಟ್‌ಗಾಗಿ ಸ್ಟಾರ್ ಸ್ಪೋರ್ಟ್ಸ್ ವಿಭಿನ್ನ ರೀತಿಯ ಪ್ರೋಮೋ ಬಿಡುಗಡೆ ಮಾಡಿದೆ.
ಜೂನ್ 2ರಂದು ಟ್ವೀಟ್ ಮಾಡಿರುವ ಸ್ಟಾರ್ ಸ್ಪೋರ್ಟ್ಸ್, ಭಾರತೀಯ ತಂಡದ ರೋಚಕ ಗೆಲುವುಗಳು, ಪಂದ್ಯಗಳ ರೋಮಾಂಚಕ ಕ್ಷಣಗಳು, ನ್ಯೂಜಿಲೆಂಡ್-ಭಾರತ ಮುಖಾಮುಖಿಗಳ ಝಲಕ್ ನೀಡುವ ವಿಡಿಯೋ ಹಾಕಿಕೊಂಡಿದೆ. ವಿಡಿಯೋ ಜೊತೆಗೆ, 'ಭಾರತ ತಂಡದ ನಿರ್ಭೀತ ಪಯಣ ಅಂತಿಮ ಟೆಸ್ಟ್ ಮೂಲಕ ಕೊನೆಗೊಳ್ಳಲಿದೆಯೇ?' ಎಂಬ ಸಾಲನ್ನೂ ಹಾಕಿದೆ.