ಕೊರೊನಾವೈರಸ್: ವಿರಾಟ್ ಕೊಹ್ಲಿ, ರಾಹುಲ್, ಮಯಾಂಕ್ ವಿಶೇಷ ಸಂದೇಶ

ನವದೆಹಲಿ, ಮಾರ್ಚ್ 14: ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳು 80 ದಾಟಿದೆ. ಆತಂಕಕಾರಿಯಾಗಿ ಹಬ್ಬುತ್ತಿರುವ ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಎಲ್ಲಾ ಕ್ರೀಡಾಕೂಟಗಳು ರದ್ದಾಗುತ್ತಿವೆ, ಮುಂದೂಡಲ್ಪಡುತ್ತಿವೆ. ಭಾರತದಲ್ಲಿ ಕ್ರೀಡಾಪಟುಗಳಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿಲ್ಲ. ಆದರೆ ವಿದೇಶದಲ್ಲಿ ಈಗಾಗಲೇ ಕ್ರೀಡಾಪಟುಗಳೂ ಮಾರಕ ಸೋಂಕಿಗೆ ತುತ್ತಾಗಿರುವುದು ವರದಿಯಾಗಿದೆ.
ಎನ್‌ಬಿಎ ಟೂರ್ನಿಯಲ್ಲಿ ಆಡುತ್ತಿದ್ದ ಉತಾಹ್ ಜಾಝ್‌ನ ಆಟಗಾರ ರೂಡಿ ಗೊಬರ್ಟ್‌ಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಆತನ ತಂಡದ ಇನ್ನೊಬ್ಬನಲ್ಲೂ ಸೋಂಕು ಇರುವುದು ಕಂಡುಬಂದಿತ್ತು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಇಬ್ಬರು ಕ್ರಿಕೆಟಿಗರಿಗೆ ಕೊರೊನಾವೈರಸ್ ಪರೀಕ್ಷೆ ನಡೆಸಲಾಯಿತಾದರೂ ಫಲಿತಾಂಶ ನೆಗೆಟಿವ್ ಎಂದು ಬಂದಿದೆ.
ಮಾರಕ ಸೋಂಕಿನಿಂದ ಆತಂಕಕ್ಕೀಡಾಗಿರುವ ಭಾರತೀಯರಿಗೆ ದೇಸಿ ಕ್ರಿಕೆಟಿಗರು ವಿಶೇಷ ಟ್ವೀಟ್‌ಗಳ ಮೂಲಕ ಧೈರ್ಯ ತುಂಬಿದ್ದಾರೆ, ಸಲಹೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಟ್ವೀಟ್
ದೈರ್ಯವಾಗಿ ಕೊರೊನಾ ವೈರಸ್ ಅನ್ನು ಎದುರಿಸೋಣ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳೋಣ. ಸುರಕ್ಷಿತವಾಗಿ ಉಳಿಯೋಣ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾರ್ಚ್ 14ರಂದು ಟ್ವೀಟ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ರದ್ದಾಗಿರುವುದರಿಂದ ಭಾರತದ ಆಟಗಾರರು ಸದ್ಯ ಬಿಡುವಿನಲ್ಲಿದ್ದಾರೆ.

ಪರಸ್ಪರ ಜಾಗ್ರತೆವಹಿಸಿ
ಇಂಥ ಸಮಯದಲ್ಲಿ ಎಲ್ಲರೂ ಧೈರ್ಯವಾಗಿರೋಣ. ಒಬ್ಬರಿಗೊಬ್ಬರು ಜಾಗ್ರತೆವಹಿಸೋಣ. ವೈದ್ಯಾಧಿಕಾರಿಗಳ ಸೂಚನೆಗಳನ್ನು ಪಾಲಿಸೋಣ. ಸುರಕ್ಷಿತವಾಗಿ ಉಳಿಯೋಣ ಎಂದು ಕರ್ನಾಟಕದ ಆಟಗಾರ ಕೆಎಲ್ ರಾಹುಲ್ ಕೂಡ ಟ್ವೀಟ್ ಮೂಲಕ ದೈರ್ಯ ತುಂಬಿದ್ದಾರೆ.

ಎಲ್ಲಾ ಕ್ರೀಡಾಸ್ಪರ್ಧೆಗಳು ರದ್ದು
ಕೊರೊನಾ ವೈರಸ್‌ನಿಂದಾಗಿ ಭಾರತದ ಎಲ್ಲಾ ಕ್ರೀಡಾಕೂಟಗಳು ರದ್ದಾಗಿವೆ. ದಕ್ಷಿಣ ಆಫ್ರಿಕಾ-ಭಾರತ ಸರಣಿ, ಐಪಿಎಲ್, ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಎಲ್ಲಾ ವಿದೇಶಿ, ದೇಸಿ ಟೂರ್ನಿಗಳೂ ರದ್ದಾಗಿವೆ. ಕ್ರಿಕೆಟ್‌ಗೆ ಹೊರತಾಗಿಯೂ ಬೇರೆ ಕ್ರೀಡಾಕೂಟಗಳೂ ನಡೆಯುತ್ತಿಲ್ಲ.

ಮಯಾಂಕ್ ಸ್ಪೆಷಲ್ ಟ್ವೀಟ್
ಕರ್ನಾಟಕ ತಂಡದ ಮತ್ತೊಬ್ಬ ಆಕರ್ಷಣೀಯ ಆಟಗಾರ ಮಯಾಂಕ್ ಅಗರ್ವಾಲ್ ಕೊಂಚ ಭಿನ್ನವಾಗಿ ಟ್ವೀಟ್ ಮಾಡಿದ್ದಾರೆ. 'ಕೈ ತೊಳೆಯಿರಿ, ಜನಸಂದಣಿಯಿಂದ ಸಾಧ್ಯವಾದಷ್ಟು ದೂರವಿರಿ, ಹುಷಾರಿಲ್ಲ ಅನ್ನಿಸಿದರೆ ಮನೆಯಲ್ಲೇ ವಿಶ್ರಾಂತಿ ಪಡೆಯಿರಿ, ವಾಟ್ಸ್‌ಆ್ಯಪ್ ಸಂದೇಶಗಳನ್ನು ನಂಬಬೇಡಿ, ಭಯಪಡಬೇಡಿ,' ಎಂದು ಬರೆದು ಮತ್ತೊಮ್ಮೆ ಕೈತೊಳೆಯಿರಿ ಎಂದು ಬರೆದಿದ್ದಾರೆ. ಅಂದರೆ ಸ್ವಚ್ಛತೆ ಕಡೆ ಹೆಚ್ಚು ಗಮನ ಕೊಡಿ ಎಂಬರ್ಥದಲ್ಲಿ ಮಯಾಂಕ್ ಹೀಗೆ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications