ಮಣಿಕಟ್ಟಿನ ಗಾಯದ ಹೊರತಾಗಿಯೂ ಆಶಸ್ ಸರಣಿಯಲ್ಲಿ ಆಡಿದ್ದಾಗಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಬಹಿರಂಗಪಡಿಸಿದ್ದಾರೆ. 34ರ ಹರೆಯದ ಸ್ಮಿತ್, ಲಾರ್ಡ್ಸ್ ಟೆಸ್ಟ್ ವೇಳೆ ತಮ್ಮ ಮಣಿಕಟ್ಟಿಗೆ ಗಾಯ ಮಾಡಿಕೊಂಡಿದ್ದರಿಂದ ಊದಿಕೊಂಡಿತ್ತು ಎಂದು ತಿಳಿದು ಬಂದಿದೆ. ಅವರು ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 110 ರನ್ ಸಿಡಿಸಿ ಕಾಂಗರೂ ಪಡೆಗೆ ಆಧಾರವಾಗಿದ್ದರು.
ಈ ಗಾಯದ ನೋವಿನ ನಡುವೆಯೂ ಸ್ಮಿತ್ ದೇಶಕ್ಕಾಗಿ ಭರ್ಜರಿ ಬ್ಯಾಟಿಂಗ್ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ, ತಮ್ಮ ವೃತ್ತಿ ಬದುಕನ್ನೇ ಪಣವಾಗಿಟ್ಟು ಆಡಿದ್ದರಿಂದ, ದಕ್ಷಿಣ ಆಫ್ರಿಕಾ ಪ್ರವಾಸದಿಂದ ದೂರ ಉಳಿಯಬೇಕಾಗಿದೆ. ಸ್ಟೀವ್ ಸ್ಮಿತ್ ಅವರಿಗೆ ಆದ ಗಾಯ ನಿಜಕ್ಕೂ ಆಸ್ಟ್ರೇಲಿಯಾ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸ್ಟೀವ್ ಸ್ಮಿತ್ ಚೇತರಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಆಶಸ್ ಟೆಸ್ಟ್ ಸರಣಿಯ 5 ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ 56.09ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಒಟ್ಟಾರೆ ಸರಣಿಯಲ್ಲಿ 373 ರನ್ ಕಲೆ ಹಾಕಿದ್ದು, 1 ಶತಕ, 2 ಅರ್ಧಶತಕ ಸೇರಿವೆ. ಭರ್ಜರಿ ಪ್ರದರ್ಶನ ನೀಡುವ ಸ್ಟೀವನ್ ಸ್ಮಿತ್ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ. ಸ್ಮಿತ್ ಈ ವರ್ಷದ ಆಶಸ್ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಸ್ಟ್ರೇಲಿಯನ್ ಆಟಗಾರ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು 'ಆಗ ನಾನು ನೋವು ನಿವಾರಕ ಚುಚ್ಚುಮದ್ದನ್ನು ತೆಗೆದುಕೊಂಡೆ. ಮನೆಗೆ ಹಿಂದಿರುಗಿದ ನಂತರ, ಗಾಯ ಚೇತರಿಕೆ ಕಾಣದೇ ಇರುವುದು ತಿಳಿಯಿತು. ಇನ್ನೂ ಸಮಸ್ಯೆಗಳಿವೆ. ನಾನು ಸ್ಕ್ಯಾನ್ ಮಾಡಿಸಿದ್ದೇನೆ. ಈ ವೇಳೆ ಕೈಗೆ ಗಾಯವಾಗಿರುವುದು ಕಂಡುಬಂದಿದೆ' ಎಂದು ತಿಳಿಸಿದ್ದಾರೆ.
ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್ ಕಳೆದ ಶುಕ್ರವಾರದಂದು ಕೊನೆಯ ಕ್ಷಣದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಆಶಸ್ ಸರಣಿಯ ನಂತರ, ಸ್ಟಾರ್ಕ್‌ಗೆ ಸ್ವಲ್ಪ ಬೆನ್ನು ನೋವಿದೆ ಮತ್ತು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ತಿಳಿದು ಬಂದಿದೆ.
ಓವಲ್‌ನಲ್ಲಿ ನಡೆದ ಆಶಸ್ ಟೆಸ್ಟ್ ಕೊನೆಯ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೆಲದ ಮೇಲೆ ಬಿದ್ದ ನಂತರ ಅವರ ಎಡ ಮಣಿಕಟ್ಟಿಗೆ ತೀವ್ರವಾದ ಗಾಯವಾಗಿದೆ. ಕಮ್ಮಿನ್ಸ್ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಮತ್ತು ಟಿ20 ಸರಣಿಗೆ ಲಭ್ಯರಿಲ್ಲ. ಆದರೆ ಸೆಂಚುರಿಯನ್‌ನಲ್ಲಿ ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯದ ವೇಳೆಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಟೀವ್ ಸ್ಮಿತ್ ಬದಲಿಗೆ ಮಾರ್ನಸ್ ಲ್ಯಾಬುಶೇನ್ ಅವರಿಗೆ ಅವಕಾಶ ಸಿಕ್ಕಿದೆ, ಆದರೆ, ಮಾರ್ನಸ್ ಏಕದಿನ ವಿಶ್ವಕಪ್‌ನಲ್ಲಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಮಿತ್ ಬದಲಿಗೆ ಆಶ್ಟನ್ ಟರ್ನರ್ ಸ್ಥಾನ ಪಡೆದಿದ್ದಾರೆ.
ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕಾಂಗರೂ ತಂಡ 3 ಟಿ-20 ಮತ್ತು 5 ಏಕದಿನ ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಆಸ್ಟ್ರೇಲಿಯಾ ತಂಡ ವಿಶ್ವಕಪ್‌ಗೂ ಮುನ್ನ ಭಾರತ ವಿರುದ್ಧ 3 ಏಕದಿನ ಪಂದ್ಯಗಳನ್ನು ಆಡಲಿದೆ.