ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಆದರೆ ಭರವಸೆಯ ಆಟಗಾರರ ಸ್ಟೀವನ್ ಸ್ಮಿತ್ ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳ್ತಾ ಇದ್ದರೂ ಸಹ, ಇನ್ನೊಂದು ತುದಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಸ್ಮಿತ್ ಅಮೋಘ ಬ್ಯಾಟಿಂಗ್ ಮಾಡಿ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು.
ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ದಕ್ಷಿಣ ಆಫ್ರಿಕಾದ ಬೌಲರ್‌ಗಳ ಸವಾಲುಗಳನ್ನು ಮೆಟ್ಟಿನಿಂತು ರನ್ ಮಹಲ್ ಕಟ್ಟಿದರು. ಇವರು 10 ಬೌಂಡರಿ ಸಹಾಯದಿಂದ 66 ರನ್ ಬಾರಿಸಿ ಔಟ್ ಆದರು. ಈ ಮೂಲಕ ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 212 ರನ್‌ಗಳನ್ನು ಕಲೆ ಹಾಕುವಲ್ಲಿ ಮಹತ್ವದ ಕೊಡುಗೆ ನೀಡಿದರು. ಈ ಅರ್ಧಶತಕದ ಇನಿಂಗ್ಸ್ ಮೂಲಕ ಸ್ಮಿತ್ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಕ್ರಿಕೆಟ್ ಕಾಶಿ ಎಂದೆ ಕರೆಸಿಕೊಳ್ಳುವ ಲಾರ್ಡ್ಸ್ ಅಂಗಳದಲ್ಲಿ ಸ್ಮಿತ್ 51 ರನ್ ಬಾರಿಸುತ್ತಾ ಇದ್ದಂತೆ 99 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು. ಈ ಮೈದಾನದಲ್ಲಿ ವಿದೇಶಿ ಬ್ಯಾಟರ್ ಬಾರಿಸಿದ ಗಳಿಸಿದ ಅತಿ ಹೆಚ್ಚು ರನ್ ಮಾರ್ಕ್‌ನ್ನು ಸ್ಮಿತ್ ಮೀರಿ ನಿಂತರು. 1909 ರಿಂದ 1926ರ ವರೆಗೆ ಆಸ್ಟ್ರೇಲಿಯಾ ವಾರೆನ್ ಬಾರ್ಡ್ಸಲಿ ಅವರ ದಾಖಲೆಯನ್ನು ಸ್ಮಿತ್ ಅಳಿಸಿ ಹಾಕಿದರು. ವಾರೆನ್ ಬಾರ್ಡ್ಸಲಿ ಲಾರ್ಡ್ಸ್‌ನಲ್ಲಿ ಆಡಿದ 5 ಟೆಸ್ಟ್ ಪಂದ್ಯಗಳ 7 ಇನಿಂಗ್ಸ್‌ನಲ್ಲಿ 575 ರನ್ ಬಾರಿಸಿದ್ದರು. ಇದರಲ್ಲಿ 2 ಶತಕ ಹಾಗೂ 2 ಅರ್ಧಶತಕಗಳು ಸಹ ಸೇರಿದ್ದವು. ಈ ದಾಖಲೆಯನ್ನು ಸ್ಮಿತ್ ಮೀರಿ ನಿಂತರು. ಸ್ಮಿತ್ 2 ಶತಕ, 3 ಅರ್ಧಶತಕಗಳ ಸಹಾಯದಿಂದ ಲಾರ್ಡ್ಸ್‌ನಲ್ಲಿ 591 ರನ್ ಸಿಡಿಸಿ ನೂತನ ಇತಿಹಾಸ ನಿರ್ಮಿಸಿದ್ದಾರೆ.
ಇದೇ ಇನಿಂಗ್ಸ್ ಮೂಲಕ ಸ್ಮಿತ್ ಆಸ್ಟ್ರೇಲಿಯಾ ದಿಗ್ಗಜ ಡಾನ್ ಬ್ರಾಡ್ಮನ್ (551 ರನ್), ವೆಸ್ಟ್ ಇಂಡೀಸ್‌ನ ಗ್ಯಾರಿ ಸೋಬರ್ಸ್ (571 ರನ್) ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈಗ ಸ್ಮಿತ್ ಚಿತ್ತ ಲಾರ್ಡ್ಸ್ ಅಂಗಳದಲ್ಲಿ 600 ರನ್ ಕಲೆ ಹಾಕುವತ್ತ ನೆಟ್ಟಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಈ ವರೆಗೆ ಎರಡು ಬಾರಿ ನಡೆದಿದೆ. ಈ ಎರಡೂ ಪಂದ್ಯಗಳಲ್ಲಿ ಭಾರತದ ಅಜಿಂಕ್ಯ ರಹಾನೆ ಮನಮೋಹಕ ಬ್ಯಾಟಿಂಗ್ ನಡೆಸಿದ್ದರು. ಅಲ್ಲದೆ 199 ರನ್ ಬಾರಿಸಿದ್ದರು. ಈ ದಾಖಲೆಯನ್ನು ಸ್ಮಿತ್ 45 ರನ್ ಪೂರ್ಣಗೊಳಿಸುತ್ತಿದ್ದಂತೆ ಅಳಿಸಿ ಹಾಕಿದರು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ 200 ರನ್‌ಗಳ ಗಡಿ ದಾಟಿದ ಮೊದಲ ಆಟಗಾರ ಎಂಬ ಶ್ರೇಯ ಸ್ಮಿತ್‌ಗೆ ಸಲ್ಲುತ್ತದೆ. ಇವರು ಫೈನಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇಲ್ಲಿಯವರೆಗೆ ಇವರು ಎರಡು ಪಂದ್ಯಗಳಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ.