ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತ ವಿರುದ್ಧ ರಣತಂತ್ರ ರೂಪಿಸಿದ ಆಸೀಸ್; 4ನೇ ಸ್ಥಾನಕ್ಕೆ ಸ್ಮಿತ್ ಫಿಕ್ಸ್
ಬಾರ್ಡರ್-ಗವಾಸ್ಕರ್ ಟ್ರೋಫಿ 2024ರ ಟೆಸ್ಟ್ ಸರಣಿಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 10 ವರ್ಷಗಳಿಂದ ಭಾರತದ ಎದುರು ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಈ ಬಾರಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನು ತವರಿನಲ್ಲಿ ಸೋಲಿಸಲು ಆಸ್ಟ್ರೇಲಿಯಾ ರಣತಂತ್ರ ರೂಪಿಸುತ್ತಿದೆ.
ಆಸ್ಟ್ರೇಲಿಯಾದ ಸ್ಪೋಟಕ ಎಡಗೈ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ನಿವೃತ್ತಿಯ ನಂತರ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಇನ್ನಿಂಗ್ಸ್ ಆರಂಭಿಸಿದ್ದರು. ಇದಾದ ಬಳಿಕ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಇನ್ನಿಂಗ್ಸ್ ಆರಂಭಿಸುವ ಬಗ್ಗೆ ನಿರೀಕ್ಷೆಗಳಿದ್ದವು. ಆದರೆ ಇದೀಗ ಸ್ಮಿತ್ ತಮ್ಮ ಸ್ಥಾನಕ್ಕೆ ಮರಳಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ 2024ರಲ್ಲಿ ಭಾರತದ ವಿರುದ್ಧ ಸ್ಟೀವ್ ಸ್ಮಿತ್ ಆರಂಭಿಕ ಬ್ಯಾಟರ್ ಅಲ್ಲ ಎಂದು ಆಸ್ಟ್ರೇಲಿಯಾದ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಖಚಿತಪಡಿಸಿದ್ದಾರೆ. ಭಾರತದ ವಿರುದ್ಧ 4ನೇ ಸ್ಥಾನಕ್ಕೆ ಸ್ಟೀವ್ ಸ್ಮಿತ್ ಮರಳಲಿದ್ದಾರೆ. ಈಗ ತಮ್ಮ ನೆಚ್ಚಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಸ್ಮಿತ್ ಸಂತಸಗೊಂಡಿದ್ದಾರೆ. ಈ ಮೂಲಕ ಅವರ ಆರಂಭಿಕ ಬ್ಯಾಟಿಂಗ್ ಪಯಣವೂ ಕೊನೆಗೊಂಡಿದೆ.
2024ರ ನವೆಂಬರ್ 22 ರಿಂದ ಪರ್ತ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಸಜ್ಜಾಗುತ್ತಿದೆ.
ಜಾರ್ಜ್ ಬೈಲಿ ಹೇಳಿದ್ದೇನು?
ಭಾರತ ವಿರುದ್ಧದ ಟೆಸ್ಟ್ ಸರಣಿಗಾಗಿ ಸ್ಮಿತ್ ತಮ್ಮ 4ನೇ ಸ್ಥಾನಕ್ಕೆ ಮರಳಲು ನಿರ್ಧರಿಸಿದ್ದಾರೆ. ಇದಾದ ಬಳಿಕ ವಿಷಯ ಹೊರಗೆ ಬಂದಿದೆ. ಭಾರತದ ಕೊನೆಯ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್, ಬೆನ್ನಿನ ಶಸ್ತ್ರಚಿಕಿತ್ಸೆಯ ಕಾರಣದಿಂದ ಆರು ತಿಂಗಳ ಕಾಲ ಹೊರಗುಳಿಯಲಿದ್ದಾರೆ. ಪರಿಣಾಮ ಈ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗ್ರೀನ್ ಆಡುತ್ತಿಲ್ಲ. ಹೀಗಾಗಿ ಗ್ರೀನ್ ಸ್ಥಾನಕ್ಕೆ ಮರಳಿ ಸ್ಮಿತ್ ಬರುತ್ತಿರುವುದಾಗಿ ಬೈಲಿ ಮಾಹಿತಿ ನೀಡಿದ್ದಾರೆ.
ಡೇವಿಡ್ ವಾರ್ನರ್ ಬದಲಿಗೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಆರಂಭಿಕರಾಗಿದ್ದರು. ಆದರೆ ಈ ಎರಡು ಸರಣಿಗಳಲ್ಲಿ ಉಸ್ಮಾನ್ ಖವಾಜಾ ಅವರೊಂದಿಗೆ ಸ್ಟೀವ್ ಸ್ಮಿತ್ ಇನ್ನಿಂಗ್ಸ್ ತೆರೆಯುವ ಅವಕಾಶ ಪಡೆದಿದ್ದರು. ಆದರೆ ಆರಂಭಕರಾಗಿ ಬ್ಯಾಟ್ ಬೀಸಿದ ಸ್ಮಿತ್ ಫ್ಲಾಪ್ ಆಗಿದ್ದರು. ಕಳೆದೊಂದು ದಶಕದಿಂದ ಆಸ್ಟ್ರೇಲಿಯಾದ ಬ್ಯಾಟಿಂಗ್‌ನ ಪ್ರಬಲ ಆಧಾರ ಸ್ತಂಭವಾಗಿದ್ದ ಸ್ಮಿತ್ ಆರಂಭಿಕರಾಗಿ ಕಳಪೆ ಪ್ರದರ್ಶನ ನೀಡಿದ್ದು ತಂಡದ ಚಿಂತೆಗೆ ಕಾರಣವಾಗಿತ್ತು. ಈಗ ಮರಳಿ ಸ್ಮಿತ್ ತಮ್ಮ ನಾಲ್ಕನೇ ಸ್ಥಾನಕ್ಕೆ ಬರುತ್ತಿರುವುದು ಟೀಮ್ ಇಂಡಿಯಾಗೂ ಹೊಸ ಸವಾಲು ಎದುರಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications