
ಭಾರತೀಯ ಕ್ರಿಕೆಟ್‌ನ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ವೀಕ್ಷಕ ವಿವರಣೆಯ ಸಂದರ್ಭದಲ್ಲಿ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಬಳಿಕ ಈ ವಿಚಾರವಾಗಿ ಸುನಿಲ್ ಗವಾಸ್ಕರ್ ಸ್ಪಷ್ಟೀಕರಣವನ್ನೂ ನೀಡಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಸುನಿಲ್ ಗವಾಸ್ಕರ್ ಮುಂದೆ ಬಂದಿದ್ದು ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ನಿರೀಕ್ಷೆಯನ್ನು ವ್ಯಕ್ತಡಿಸಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನವನ್ನು ನೀಡಿದ್ದಾರೆ. ಆದರೆ ಮುಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಆಟವನ್ನು ಆಡುವ ನಿರೀಕ್ಷೆಯನ್ನು ಗವಾಸ್ಕರ್ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಅಂತ್ಯಕ್ಕೆ ವಿರಾಟ್ ಕೊಹ್ಲಿ 400-500 ರನ್‌ಗಳನ್ನು ಗಳಿಸಿರುತ್ತಾರೆ ಎಂದು ಗವಾಸ್ಕರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಆರಂಭವನ್ನು ಪಡೆದುಕೊಂಡಿರಬಹುದು. ಆದರೆ ಅವರು ಪ್ರತಿ ಬಾರಿಯ ಐಪಿಎಲ್‌ನಲ್ಲಿ ಗಳಿಸಿಕೊಂಡು ಬರುತ್ತಿರುವಂತೆ 400-500 ರನ್‌ಗಳನ್ನು ಗಳಿಸಲಿದ್ದಾರೆ. ಒಂದು ವರ್ಷದಲ್ಲಂತೂ ವಿರಾಟ್ ಕೊಹ್ಲಿ 1000 ರನ್‌ಗಳ ಸನಿಹಕ್ಕೆ ತಲುಪಿದ್ದರು. 4 ಶತಕವನ್ನು ಗಳಿಸಿದ್ದರು ಎಂದು ಸುನಿಲ್ ಗವಾಸ್ಕರ್ ಪಂದ್ಯದ ಬಳಿಕ ಮಾತನಾಡುತ್ತಾ ಹೇಳಿದ್ದಾರೆ.
2016ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅತಿ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು. ಆ ಟೂರ್ನಿಯಲ್ಲಿ 973 ರನ್‌ಗಳಿಸಿದ್ದರು ವಿರಾಟ್ ಕೊಹ್ಲಿ. ಈ ಬಾರಿಯ ಟೂರ್ನಿಯಲ್ಲಿ ಕೊಹ್ಲಿಗೆ ಆ ಮಟ್ಟವನ್ನು ತಲುಪಲು ಸಾಧ್ಯವಾಗದೇ ಇರಬಹುದು.ಆದರೆ ಐನೂರು ರನ್ ಗಳಿಸಲಿದ್ದಾರೆ ಎಂದು ಗವಾಸ್ಕರ್ ಅಭಿಪ್ರಾಯ ಹೇಳಿದ್ದಾರೆ.