
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಂತರ ಭಾರತ ಈಗ ಶ್ರೀಲಂಕಾ ವಿರುದ್ಧಧ ಟಿ20 ಸರಣಿಯಲ್ಲಿ ಆಡುತ್ತಿದ್ದು ಈ ಸರಣಿಯಲ್ಲಿಯೂ ವೈಟ್‌ವಾಶ್ ಮೂಲಕ ಸರಣಿಯನ್ನು ವಶಕ್ಕೆ ಪಡೆಯುವ ಹಂಬಲದಲ್ಲಿದೆ. ಈ ಸಂದರ್ಭದಲ್ಲಿ ಭಾರತದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ನೀಡುತ್ತಿರುವ ಪ್ರದರ್ಶನ ತಂಡಕ್ಕೆ ನಿರಾಳತೆ ಮೂಡಿಸಿರುವುದರಲ್ಲಿ ಅನುಮಾನವಿಲ್ಲ. ಇತ್ತೀಚೆಗೆ ಕಳಗುಂದಿದಂತೆ ಕಂಡುಬಂದಿದ್ದ ಭುವಿ ಬೌಲಿಂಗ್ ತೀಕ್ಷ್ಣತೆ ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಂತರ ಮತ್ತೆ ಮರಳಿ ಪಡೆದಿರುವಂತೆ ಭಾಸವಾಗುತ್ತಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಒಂದರ ನಂತರ ಮತ್ತೊಂದು ಅದ್ಭುತ ಪ್ರದರ್ಶನ ನೀಡುತ್ತಿರುವ ಭುವನೇಶ್ವರ್ ಕುಮಾರ್ ಬಗ್ಗೆ ಸುನಿಲ್ ಗವಾಸ್ಕರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಯಶಸ್ಸನ್ನು ಪಡೆದ ನಂತರವೂ ಭುವನೇಶ್ವರ್ ಕುಮಾರ್ ವಿಶ್ರಾಂತಿಯನ್ನು ಬಯಸುತ್ತಿಲ್ಲ. ಅವರು ತಮ್ಮ ಹಿಂದಿನ ಮೊನಚನ್ನು ಪಡೆಯಲು ಕಠಿಣ ಪರಿಶ್ರಮವನ್ನು ಪಟ್ಟಿದ್ದಾರೆ ಎಂದಿದ್ದಾರೆ ಗವಾಸ್ಕರ್.
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಎರಡು ಓವರ್‌ಗಳ ಬೌಲಿಂಗ್ ಸ್ಪೆಲ್‌ನಲ್ಲಿ ಕೇವಲ 9 ರನ್ ನೀಡಿ 2 ವಿಕೆಟ್ ಕಿತ್ತು ಮಿಂಚಿದ್ದರು. ಇನ್ನು ಇತ್ತೀಚೆಗೆ ಅಂತ್ಯವಾಗಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಆಡಿದ ಎರಡು ಪಂದ್ಯದಲ್ಲಿಯೂ ಭುವಿ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದರು.
ಕಳೆದ ಎರಡ ವರ್ಷಗಳಲ್ಲಿ ಗಾಯದ ಸಮಸ್ಯೆಗೆ ಪದೇ ಪದೆ ಒಳಗಾಗಿದ್ದ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಮೊನಚನ್ನು ಕಳೆದುಕೊಂಡಿದ್ದರು. ದಕ್ಷಿಣ ಆಪ್ರಿಕಾ ವಿರುದ್ಧಧ ಪ್ರವಾಸದಲ್ಲಿಯೂ ಮಿಂಚಲು ವಿಫಲವಾಗಿದ್ದ ಭುವಿ ಅದಕ್ಕೂ ಹಿಂದೆ ಟಿ20 ವಿಶ್ವಕಪ್‌ನಲ್ಲಿಯೂ ಕಳಪೆ ಪ್ರದರ್ಶನದ ಕಾರಣದಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಕಳೆದ ಎರಡು ವರ್ಷಗಳಲ್ಲಿ 7 ಏಕದಿನ ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ 9 ವಿಕೆಟ್ ಮಾತ್ರವೇ ಸಂಪಾದಿಸಿದ್ದರು. ಆದರೆ ಈಗ ಭುವನೇಶ್ವರ್ ಅವರ ಫಾರ್ಮ್ ಅವರ ಕಠಿಣ ಪರಿಶ್ರಮವನ್ನು ವ್ಯಕ್ತಪಡಿಸುತ್ತಿದೆ ಎಂದಿದ್ದಾರೆ ಸುನಿಲ್ ಗವಾಸ್ಕರ್.
"ಹೌದು ಆತ ಮತ್ತೊಮ್ಮೆ ತನ್ನತ್ತ ಗಮನಸೆಳೆಯುವಂತೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಅವರು ಸಾಮಾನ್ಯ ಪ್ರದರ್ಶನ ನೀಡಿದ್ದರು ನಿಜ. ಆದರೆ ಅವರು ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಇರುವ ಸ್ಪರ್ಧೆಯನ್ನು ಗಮನಿಸಿ, ಯಾರು ಕೂಡ ಆತನ ಸ್ಥಾನವನ್ನು ಸುಲಭವಾಗಿ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸುದೀರ್ಘ ಕಾಲದಿಂದ ಆಡುತ್ತಿರುವ ಅವರು ತಂಡದ ಅನುಭವಿ ಬೌಲರ್ ಕೂಡ ಆಗಿದ್ದಾರೆ. ಅವರು ಸ್ವಲ್ಪ ಎಡವಿದ್ದಾಗ ಸಾಕಷ್ಟು ಪ್ರಶ್ನೆಗಳು ಎದುರಾಗಿದ್ದವು. ಆದರೆ ಈಗ ಅವರಾಗಿಯೇ ಮತ್ತೆ ಪುಟಿದುನಿಂತಿದ್ದಾರೆ" ಎಂದು ಸುನಿಲ್ ಗವಾಸ್ಕರ್ ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
"ಆತ ಪ್ರದರ್ಶನದಲ್ಲಿ ಹಿನ್ನಡೆ ಕಂಡಾಗ ಕುಸಿದುಹೋಗಲಿಲ್ಲ, ಅಥವಾ ಏನಾಗುತ್ತಿದೆ ಎಂದು ಚಿಂತಿಸಲಿಲ್ಲ. ಆತ ಸಾಕಷ್ಟು ಕಠಿಣ ಪರಿಶ್ರಮವನ್ನು ಪಟ್ಟಿದ್ದಾರೆ. ಆತ ತನ್ನ ಬೌಲಿಂಗ್ ಮೇಲೆ ಸಂಪೂರ್ಣ ಗಮನಹರಿಸುತ್ತಾ ಪ್ರತಿದಿನವೂ ಉತ್ತಮ ಪ್ರದರ್ಶನ ನೀಡುವತ್ತ ಗಮನಹರಿಸಿದ್ದಾರೆ. ಅದು ಬಹಳ ಮುಖ್ಯವಾಗುತ್ತದೆ. ಆತ ತನಗೆ ದೊರೆತ ಪ್ರಶಸ್ತಿಗಳಿಂದ ವಿಶ್ರಾಂತಿ ಪಡೆದು ಕೂರಲಿಲ್ಲ. ಆತ ಆಸ್ಟ್ರೇಲಿಯಾದಲ್ಲಿ ತನಗೆ ಹೆಚ್ಚುವರ ವೇಗ ಹಾಗೂ ಬೌನ್ಸ್ ದೊರೆಯುತ್ತದೆ ಎನ್ನುತ್ತಿದ್ದಾರೆ. ಹಾಗಾಗಿ ಅವರು ಮುಂದಿನ ವಿಶ್ವಕಪ್‌ನ ಸ್ಪರ್ಧೆಯಲ್ಲಿ ಇದ್ದಾರೆ" ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.
ಇನ್ನು ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಮೊದಲಿಗೆ ಬ್ಯಾಟಿಂಗ್ ಮಾಡಿ ಇಶಾನ್ ಕಿಶನ್, ಶ್ರೇಯಸ್ ಐಯ್ಯರ್ ಹಾಗೂ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದಾಗಿ 199 ರನ್‌ಗಳನ್ನು ಗಳಿಸಿತ್ತು. ಇದನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಭಾರತದ ಬೌಲಿಂಗ್ ದಾಳಿಗೆ ಬೆದರಿ ಕೇವಲ 137 ರನ್‌ಗಳಿಗೆ ತನ್ನ ಆಟವನ್ನು ಮುಗಿಸಿದೆ. ಈ ಮೂಲಕ ಭಾರತ ಮೊದಲ ಪಂದ್ಯದಲ್ಲಿ ಬೃಹತ್ ಗೆಲುವು ಸಾಧಿಸಿದ್ದು ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಶನಿವಾರ ನಡೆಯಲಿದ್ದು ಈ ಪಂದ್ಯ ಧರ್ಮಶಾಲಾದಲ್ಲಿ ಆಯೋಜನೆಯಾಗಲಿದೆ. ಮೂರನೇ ಪಂದ್ಯವೂ ಇದೇ ತಾಣದಲ್ಲಿ ನಡೆಯಲಿದ್ದು ಭಾನುವಾರ ನಡೆಯಲಿದೆ.