BGT 2023: ನಾಗ್ಪುರ ಪಿಚ್ ಬಗ್ಗೆ ಆಸ್ಟ್ರೇಲಿಯಾ ಟೀಕೆ: ಮುಟ್ಟಿ ನೋಡುವಂತೆ ತಿರುಗೇಟು ನೀಡಿದ ಸುನಿಲ್ ಗವಾಸ್ಕರ್!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದ್ದು ಇಲ್ಲಿನ ಪಿಚ್ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ಟೀಕೆಯನ್ನು ಮಾಡಿದೆ. ಸ್ಪಿನ್ನರ್‌ಗಳಿಗೆ ನೆರವು ನೀಡುವಂತಾ ಪಿಚ್ ತಯಾರಿಸಿದ ಬಗ್ಗೆ ಆಸ್ಟ್ರೇಲಿಯಾದ ಕೆಲ ಮಾಜಿ ಆಟಗಾರರು ಸೇರಿದಂತೆ ಮಾಧ್ಯಮಗಳು ಟೀಕಿಸುತ್ತಿದೆ. ಈ ವಿಚಾರವಾಗಿ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದು ಟೀಕಾಕಾರರಿಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ್ದಾರೆ.
ಕಳೆದ ತಿಂಗಳು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್ ಹೀಲಿ ಭಾರತ ನ್ಯಾಯಯುತವಾಗಿ ಪಿಚ್ ಸಿದ್ಧಪಡಿಸುವುದಿಲ್ಲ ಎಂದು ಹೇಳುವ ಮೂಲಕ ಈ ಚರ್ಚೆಗೆ ನಾಂದಿಹಾಡಿದರು. ಈ ಬಾರಿಯೂ ಪಿಚ್‌ಗಳ ಸ್ಥಿತಿ ಹಾಗೆಯೇ ಇದ್ದರೆ ಆಸ್ಟ್ರೇಲಿಯಾ ಗೆಲ್ಲುವುದಿಲ್ಲ ಎಂದು ಮಾಜಿ ಕ್ರಿಕೆಟಿಗರು ಹೇಳಿಕೆ ನೀಡಿದ್ದರು. ಈ ಪ್ರತಿಕ್ರಿಯೆಗೆ ವಿಶ್ವ ಮಟ್ಟದಲ್ಲಿ ಪರ ವಿರೋಧ ಚರ್ಚೆಗಳು ನಡೆದಿದೆ. ಆಸ್ಟ್ರೇಲಿಯಾ ಹೊರತುಪಡಿಸಿ ವಿಶ್ವ ಕ್ರಿಕೆಟ್‌ನ ಬಹುತೇಕರು ತವರಿನ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ ಅನುಕೂಲಕರವಾದ ಪಿಚ್ ತಯಾರಿಸುವ ಬಗ್ಗೆ ಬೆಂಬಲವನ್ನು ನೀಡಿಯೇ ಮಾತನಾಡಿದ್ದಾರೆ. ಆದರೆ ಆಸ್ಟ್ರೇಲಿಯಾ ಮಾಧ್ಯಮಗಳು ಈ ವಿಚಾರವಾಗಿ ತಮ್ಮ ಮೊಂಡುತನವನ್ನು ಮುಂದುವರಿಸಿದೆ.
ಆಸ್ಟ್ರೇಲಿಯಾ ಕಳೆದ ಬಾರಿ ನೀಡಿದ್ದ ಪಿಚ್‌ಗಳ ಬಗ್ಗೆ ಮಾತನಾಡುವ ಮೂಲಕ ಮೈಂಡ್‌ಗೇಮ್‌ಗಳನ್ನು ಆರಂಭಿಸಿದ್ದಾರೆ ಎಂದು ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ. ಮುಂದುವರಿದು ಮಾತನಾಡಿದ ಅವರು "ಎರಡು ದಿನಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಮುಗಿಸಿರುವ ದೇಶಕ್ಕೆ ಭಾರತದ ಪಿಚ್‌ಗಳ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ. ಬ್ರಿಸ್ಬೇನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯ ಕೇವಲ ಎರಡು ದಿನಗಳಲ್ಲಿ ಮುಕ್ತಾಯವಾಗಿತ್ತು. ಅದು ಕೇವಲ ಎರಡು ದಿನಗಳಲ್ಲಿ ಮುಗಿದ ಬಗ್ಗೆ ಮಾತಲ್ಲ. ಅಲ್ಲಿ ಯಾವ ರೀತಿಯ ಪಿಚ್ ತಯಾರಿಸಲಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ದ ಗಾಬಾದಲ್ಲಿ ನಡೆದ ಟೆಸ್ಟ್ ಪಂದ್ಯ ಕೇವಲ ಎರಡು ದಿನಗಳಲ್ಲಿ ಮುಕ್ತಾಯವಾಗಿತ್ತು. ಈ ಪಂದ್ಯದಲ್ಲಿ ಒಟ್ಟು 34 ವಿಕೆಟ್‌ಗಳು ಪತನವಾಗಿದ್ದವು. ಪ್ರವಾಸಿ ದಕ್ಷಿಣ ಆಫ್ರಿಕಾ ತಮ್ಮ ಎರಡೂ ಇನ್ನಿಂಗ್ಸ್‌ಗಳಲ್ಲಿ 152 ಮತ್ತು 99 ರನ್ ಗಳಿಸಿದರೆ ಆಸ್ಟ್ರೇಲಿಯಾ 218 ಮತ್ತು 35/4 ರನ್ ಗಳಿಸಿ ಈ ಪಂದ್ಯವನ್ನು ಗೆದ್ದುಕೊಂಡಿತ್ತು. ಐಸಿಸಿ ಬ್ರಿಸ್ಬೇನ್‌ನ ಈ ಪಿಚ್‌ಗೆ 'ಬಿಲೋ ಎವರೇಜ್'(ಸವಾಸರಿಗಿಂತ ಕಡಿಮೆ) ರೇಟಿಂಗ್ ನೀಡಿತ್ತು.
"ಎರಡು ದಿನಗಳಲ್ಲಿ ಮುಕ್ತಾಯವಾದ ಬ್ರಿಸ್ಬೇನ್ ಟೆಸ್ಟ್ ಏನು ಹೇಳುತ್ತದೆ. ಅತ್ಯುತ್ತಮ ಆಟಗಾರರು ಕೂಡ ಇಲ್ಲಿ ತಮ್ಮ ಹೃದಯವನ್ನು ಬಾಯಲ್ಲಿಟ್ಟುಕೊಂಡು ಆಡಿದ್ದರು. ಆಸಿಸ್‌ನ ಕೆಲ ಮಾಧ್ಯಮಗಳು ಇದು ಬ್ಯಾಟರ್ಸ್ ಆಟವಾಗಿರುವುದರಿಂದ ಬೌಲರ್‌ಗಳಿಗೆ ಸ್ವಲ್ಪ ಅವಕಾಶವನ್ನು ನೀಡುತ್ತದೆ ಎಂದು ಇದಕ್ಕೆ ಬೆಂಬಲಿಸಿತ್ತು. ಹಾಗಿದ್ದರೆ ಉಪಖಂಡದ ಪಿಚ್‌ಗಳು ಮೊದಲ ದಿನದಿಂದಲೇ ಸ್ಪಿನ್ ಆಗಲು ಆರಂಭಿಸಿದರೆ ಕಿರಿಚಾಟ ಯಾಕೆ ಆರಂಭಿಸುತ್ತೀರಿ" ಎಂದು ಕಟುವಾಗಿ ಟೀಕಿಸಿದ್ದಾರೆ ಸುನಿಲ್ ಗವಾಸ್ಕರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications