ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕರುಣ್ ನಾಯರ್‌ಗೆ ಅವಕಾಶ ಸಿಕ್ಕಿಲ್ಲ. ಕರುಣ್ ನಾಯರ್ ವಿಜಯ್ ಹಜಾರೆ ಟ್ರೋಫಿ 2024-25ರ ಆವೃತ್ತಿಯಲ್ಲಿ ಆಡಿದ 8 ಇನ್ನಿಂಗ್ಸ್‌ಗಳಲ್ಲಿ 389.50 ಸರಾಸರಿಯಲ್ಲಿ 779 ರನ್ ಗಳಿಸಿದ್ದರು. ಆದರೂ ಅವರು ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್, ಕರುಣ್ ನಾಯರ್ ಅವರನ್ನು ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕರುಣ್ ನಾಯರ್ ಉತ್ತಮ ಪ್ರದರ್ಶನ ನೀಡಿದರೂ ನಿರ್ಲಕ್ಷಿಸಿರುವ ಬಗ್ಗೆ ಟೀಮ್ ಇಂಡಿಯಾದ ಮತ್ತೊಬ್ಬ ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನಿಲ್ ಗವಾಸ್ಕರ್, ಕರುಣ್ ನಾಯರ್ ಟೀಮ್ ಇಂಡಿಯಾದಲ್ಲಿ ಏಕೆ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಟೀಮ್ ಇಂಡಿಯಾದಲ್ಲಿ ಅವರನ್ನು ಯಾವ ಸ್ಥಾನದಲ್ಲಿ ಆಡಿಸಬಹುದಾಗಿತ್ತು ಎಂಬುದುರ ಬಗ್ಗೆಯೂ ತಿಳಿಸಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಬದಲಾಯಿಸಬಹುದಿತ್ತು. ಕೆಎಲ್ ರಾಹುಲ್ ಭಾರತ ತಂಡದ ಎರಡನೇ ವಿಕೆಟ್ ಕೀಪರ್-ಬ್ಯಾಟರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅವರ ಪ್ರದರ್ಶನ ಉತ್ತಮವಾಗಿತ್ತು. ನಂತರ ಭಾರತ ತಂಡ ಹೆಚ್ಚು ಏಕದಿನ ಕ್ರಿಕೆಟ್ ಆಡಲಿಲ್ಲ. ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಕೂಡ ಈ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೇ ಕಾರಣಕ್ಕೆ ಕರುಣ್ ನಾಯರ್ ಆಯ್ಕೆಯಾಗಲಿಲ್ಲ.
ರಣಜಿ ಟ್ರೋಫಿಯಲ್ಲಿ ಕರುಣ್ ನಾಯರ್ ಪ್ರದರ್ಶನ ಹೀಗೆಯೇ ಮುಂದುವರಿದರೆ ಮುಂಬರುವ ಇಂಗ್ಲೆಂಡ್ ಟೆಸ್ಟ್ ಪ್ರವಾಸದ ವೇಳೆ ಭಾರತ ತಂಡದ ಆಡಳಿತ ಮಂಡಳಿ ಅವರನ್ನು ಆಯ್ಕೆ ಮಾಡದೇ ಇರುವುದು ಕಷ್ಟ ಎಂದಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ರನ್ ಗಳಿಸಿದರೂ ಆಟಗಾರನನ್ನು ಆಯ್ಕೆ ಮಾಡದಿದ್ದರೆ, ದೇಶೀಯ ಪಂದ್ಯಗಳಿಗೆ ಪ್ರಾಮುಖ್ಯತೆ ನೀಡುವ ಭಾರತ ತಂಡದ ಮ್ಯಾನೇಜ್‌ಮೆಂಟ್‌ನ ಪ್ರಾಮಾಣಿಕತೆಯ ಬಗ್ಗೆ ಏನು ಹೇಳುವುದು ಎಂಬ ಪ್ರಶ್ನೆಗಳು ಈಗ ಎದ್ದಿವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ 15 ಆಟಗಾರರ ತಂಡದಲ್ಲಿ ಕರುಣ್ ನಾಯರ್ ಅವರನ್ನು ಸೇರಿಸುವುದು ನಿಜಕ್ಕೂ ಕಷ್ಟ ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿದ್ದಾರೆ.