ತವರಿನಲ್ಲಿ ಮುಗ್ಗರಿಸಿದ ಕೆಕೆಆರ್: ಹೈದರಾಬಾದ್‌ಗೆ 65 ರನ್ ಭರ್ಜರಿ ಜಯ
ತವರಿನಲ್ಲಿ ಮೊದಲ ಗೆಲುವಿನ ನಗೆ ಬೀರುವ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಕನಸು ಕಮರಿದೆ. 19ನೇ ಆವೃತ್ತಿಯ ಐಪಿಎಲ್‌ನ ಆರನೇ ಪಂದ್ಯದಲ್ಲಿ ಕೆಕೆಆರ್ 65 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿದೆ. ಇಶಾನ್ ಕಿಶನ್ ಪಡೆ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಟ್ರಾವಿಸ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಮೊದಲ ವಿಕೆಟ್‌ಗೆ ಪವರ್ ಫುಲ್ ಪ್ರದರ್ಶನ ನೀಡಿದರು. ಈ ಜೋಡಿ 5.4 ಓವರ್‌ಗಳಲ್ಲಿ 82 ರನ್ ಸೇರಿಸಿ ಅಬ್ಬರಿಸಿತು. ಈ ಹಂತದಲ್ಲಿ ಟ್ರಾವಿಸ್ ಹೆಡ್ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 46 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಅಭಿಷೇಕ್ ಶರ್ಮಾ (48) ಹಾಗೂ ಇಶಾನ್ ಕಿಶನ್ (14) ಅವರನ್ನು ಬ್ಲೆಸಿಂಗ್ ಮುಜರಬಾನಿ ಒಂದೇ ಓವರ್‌ನಲ್ಲಿ ಪೆವಿಲಿಯನ್‌ಗೆ ಅಟ್ಟಿದರು. ಅನಿಕೆತ್ ವರ್ಮಾ ನಿರಾಸೆ ಮೂಡಿಸಿದರು.
ಭರ್ಜರಿ ಜೊತೆಯಾಟ
118 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಎಸ್‌ಆರ್‌ಎಚ್ ತಂಡಕ್ಕೆ ನಿತೀಶ್ ಕುಮಾರ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್ ಆಧಾರವಾದರು. ಈ ಜೋಡಿ ಮಿಡ್ಲ್ ಓವರ್‌ನಲ್ಲಿ ವಿಕೆಟ್ ಬೀಳದಂತೆ ತಡೆದು ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ನಿತೀಶ್ ಕುಮಾರ್ ರೆಡ್ಡಿ 39 ರನ್‌ಗೆ ಔಟ್ ಆದರು. ಹೆನ್ರಿಕ್ ಕ್ಲಾಸೆನ್ ತಮ್ಮ ಮೇಲೆ ತಂಡ ಇಟ್ಟ ಭರವಸೆಗೆ ಪೂರಕವಾಗಿ ಬ್ಯಾಟ್ ಮಾಡಿ 52 ರನ್ ಸಿಡಿಸಿದರು. ಅಂತಿಮವಾಗಿ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 226 ರನ್ ಸೇರಿಸಿತು.
ರನ್‌ಗಳಿಸಲು ಪರದಾಟ
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೆಕೆಆರ್ ತಂಡದ ಆರಂಭಿಕ ಫಿನ್ ಅಲೆನ್ 7 ಎಸೆತಗಳಲ್ಲಿ 28 ರನ್ ಬಾರಿಸಿ ಔಟ್ ಆದರು. ಅಜಿಂಕ್ಯ ರಹಾನೆ ಆಟ 8 ರನ್‌ಗೆ ಕೊನೆಯಾಯಿತು. ಕ್ಯಾಮರೂನ್ ಗ್ರೀನ್ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು. ಮೂರನೇ ಕ್ರಮಾಂಕದ ಭರವಸೆಯ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ 52 ರನ್ ಬಾರಿಸಿ ಮುನ್ನುಗುತ್ತಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಪೆವಿಲಿಯನ್ ಸೇರಿದರು. ರಿಂಕು ಸಿಂಗ್ 35 ರನ್ ಬಾರಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಕೆಕೆಆರ್ 16 ಓವರ್‌ಗಳಲ್ಲಿ 161 ರನ್‌ಗಳಿಗೆ ಆಲೌಟ್ ಆಯಿತು.

ಎಸ್‌ಆರ್‌ಎಚ್ ತಂಡದ ಪರ ಜಯದೇವ್ ಉನಾದ್ಕಟ್ 3, ಇಶಾನ್ ಮಲಿಂಗ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 2 ವಿಕೆಟ್ ಕಬಳಿಸಿದರು. ಕೆಕೆಆರ್ ತಂಡದ ಮೊದಲ ಗೆಲುವಿನ ಆಸೆ ಮುಂದಿನ ಪಂದ್ಯಕ್ಕೆ ಶಿಫ್ಟ್ ಆಯಿತು. ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋಲು ಕಂಡಿದ್ದ ಎಸ್‌ಆರ್‌ಎಚ್ ಈ ಆವೃತ್ತಿಯಲ್ಲಿ ಮೊದಲ ಗೆಲುವಿನ ಆರಂಭ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications