ಸೂಪರ್ ಓವರ್‌ನಲ್ಲಿ 17 ರನ್ ಬೇಕಿದ್ರೂ ನೋ ಪ್ರಾಬ್ಲಮ್!: 6, 6, 6 ಸಿಡಿಸಿ ಪಂದ್ಯ ಮುಗಿಸಿದ ರಿಂಕು ಸಿಂಗ್!!
ಭಾರತದ ಯುವ ಸೆನ್ಸೇಶನ್ ರಿಂಕು ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿಯೂ ರಿಂಕು ಸಿಂಗ್ ಸತತ ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯ ಗೆಲ್ಲಿಸುವ ಮೂಲಕ ಗಮನಸೆಳೆದಿದ್ದಾರೆ. ಲೀಗ್ ಕ್ರಿಕೆಟ್ ಆಗಲಿ, ದೇಶೀಯ ಕ್ರಿಕೆಟ್ ಆಗಲಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಆಗಿರಲಿ. ತನ್ನ ಪ್ರಚಂಡ ಪ್ರದರ್ಶನದ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ರಿಂಕು ಸಿಂಗ್ ಮತ್ತೆ ಮತ್ತೆ ಯಶಸ್ವಿಯಾಗುತ್ತಿದ್ದಾರೆ.
ಐಪಿಎಲ್‌ನಲ್ಲಿ ಅಬ್ಬರಿಸಿದ್ದ ರಿಂಕು ಸಿಂಗ್ ಬಳಿಕ ಭಾರತ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಐರ್ಲೆಂಡ್ ವಿರುದ್ಧ ಆಡಿದ್ದ ಮೊದಲ ಪಂದ್ಯದಲ್ಲಿಯೇ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು ಯುವ ಕ್ರಿಕೆಟಿಗ. ಇದೀಗ ಉತ್ತರಪ್ರದೇಶ ಕ್ರಿಕೆಟ್ ಮಂಡಳಿಯ ಯುಪಿಟಿ20 ಲೀಗ್‌ನಲ್ಲಿ ಸೂಪರ್ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಮ್ಮ ತಂಡವನ್ನು ಗೆಲ್ಲಿಸಿದ್ದಾರೆ ರಿಂಕು ಸಿಂಗ್.

ಉತ್ತರ ಪ್ರದೇಶ ಕ್ರಿಕೆಟ್ ಮಂಡಳಿ ಈ ಬಾರಿ ತನ್ನ ಚೊಚ್ಚಲ ಆವೃತ್ತಿಯ ಯುಪಿ ಟಿ20 ಲೀಗ್ ಆರಂಭಿಸಿದೆ. ಈ ಲೀಗ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ರಿಂಕು ಸಿಂಗ್ ಮೀರತ್ ಮಾರ್ವಿಕ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಪಂದ್ಯದಲ್ಲಿ ಫಲಿತಾಂಶ ಟೈ ಆದ ಬಳಿಕ ಸೂಪರ್ ಓವರ್‌ನಲ್ಲಿ ಪಂದ್ಯದ ಫಲಿತಾಂಶ ನಿರ್ಧಾರವಾಗಬೇಕಿತ್ತು.
ಮಿಂಚಿದ ರಿಂಕು ಸಿಂಗ್
ಈ ಸೂಪರ್ ಓವರ್‌ನಲ್ಲಿ ರಿಂಕು ಸಿಂಗ್ ಆಡುತ್ತಿರುವ ಮೀರತ್ ಮಾರ್ವಿಕ್ಸ್ ತಂಡ ಗೆಲ್ಲಬೇಕಿದ್ದರೆ ಸೂಪರ್ ಓವರ್‌ನಲ್ಲಿ 17 ರನ್‌ಗಳನ್ನು ಗಳಿಸಬೇಕಾಗಿತ್ತು. ಈ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ರಿಂಕು ಸಿಂಗ್ ಭರ್ಜರಿಯಾಗಿ ಸತತ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಈ ಮೂಲಕ ಪಂದ್ಯದಲ್ಲಿ ತಮ್ಮ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಒತ್ತಡದ ಸಂದರ್ಭದಲ್ಲಿ ತನ್ನ ಅದ್ಭುತ ಬ್ಯಾಟಿಂಗ್ ಕೌಶಲ್ಯವನ್ನು ರಿಂಕು ಮತ್ತೊಂದು ಬಾರಿ ಪ್ರದರ್ಶಿಸಿ ಗಮನಸೆಳೆದಿದ್ದಾರೆ.
ಪಂದ್ಯದಲ್ಲಿ ವಿಫಲವಾಗಿದ್ದ ರಿಂಕು ಸಿಂಗ್
ಇದು ಯುಪಿ ಟಿ20 ಲೀಗ್‌ನ 3ನೇ ಪಂದ್ಯ. ಕಾಶಿ ರುದ್ರಾಸ್ ಹಾಗೂ ಮೀರತ್ ಮಾರ್ವಿಕ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಎರಡು ತಂಡಗಳು 20 ಓವರ್‌ಗಳ ಮುಕ್ತಾಯಕ್ಕೆ 181 ರನ್‌ಗಳನ್ನು ಗಳಿಸಿ ಟೈ ಮಾಡಿಕೊಂಡಿದ್ದವು. ಆದರೆ ಈ ಸಂದರ್ಭದಲ್ಲಿ ಮೀರತ್ ಪರವಾಗಿ ರಿಂಕು ಸಿಂಗ್ ಬ್ಯಾಟಿಂಗ್ ಮಾಡಿದ್ದರೂ ಇಲ್ಲಿ ವಿಫಲವಾಗಿದ್ದರು. 22 ಎಸೆತಗಳನ್ನು ಎದುರಿಸಿದ್ದ ರಿಂಕು 15 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡಿದ್ದರು.
ಸೂಪರ್ ಓವರ್‌ನಲ್ಲಿ ಅಬ್ಬರ
ಇನ್ನು ಸೂಪರ್ ಓವರ್‌ನಲ್ಲಿ ಕಾಶಿ ರುದ್ರಾಸ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 6 ಎಸೆತಗಲ್ಲಿ 17 ರನ್‌ಗಳನ್ನು ಗಳಿಸುವ ಸವಾಲು ಮೀರತ್ ತಂಡದ ಮುಂದಿಟ್ಟಿತ್ತು. ರಿಂಕು ಸಿಂಗ್ ಈ ಸ್ಕೋರ್ ಬೆನ್ನಟ್ಟಲು ಕಣಕ್ಕಿಳಿದಿದ್ದರು. ಶಿವ ಸಿಂಗ್ ಎಸೆದ ಮೊದಲ ಎಸೆತದಲ್ಲಿ ರಿಂಕು ರನ್‌ಗಳಿಸಲು ವಿಫಲವಾಗಿದ್ದರು. ಆದರೆ ನಂತರದ ಮೂರು ಎಸೆತಗಳನ್ನು ಕೂಡ ರಿಂಕು ಭರ್ಜರಿ ಸಿಕ್ಸರ್‌ಗೆ ಅಟ್ಟಿದ್ದಾರೆ. ಈ ಮೂಲಕ ಪಂದ್ಯದಲ್ಲಿ ತಮ್ಮ ತಂಡವನ್ನು ಗೆಲ್ಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications