
ಗಾಜಿಯಾಬಾದ್, ಜುಲೈ 14: ಕೋವಿಡ್-19 ಬಳಿಕ ಭಾರತದ ಕ್ರಿಕೆಟರ್‌ಗಳಾದ ರಿಷಭ್ ಪಂತ್ ಮತ್ತು ಸುರೇಶ್ ರೈನಾ ಅಭ್ಯಾಸ ಪುನರಾರಂಭಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಇಬ್ಬರೂ ನೆಟ್ ಅಭ್ಯಾಸ ಮಾಡಿದ್ದು ಕಂಡುಬಂತು. ಗಾಜಿಯಾಬಾದ್‌ನಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 3000ಕ್ಕೂ ಹೆಚ್ಚಿದೆ.
ಭಾರತದ ಸ್ಟಾರ್ ಆಟಗಾರರಾದ ಚೇತೇಶ್ವರ ಪೂಜಾರ, ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಅಭ್ಯಾಸ ಆರಂಭಿಸಿದ್ದಾರೆ. ಇದೇ ಸಾಲಿಗೆ ರಿಷಭ್ ಪಂತ್ ಮತ್ತು ಸುರೇಶ್ ರೈನಾ ಸೇರಿಕೊಂಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ, ಅಭ್ಯಾಸ ನಡೆಸುತ್ತಿರುವ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಹಂಚಿಕೊಳ್ಳಲಾಗಿರುವ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ 33ರ ಹರೆಯದ ಸುರೇಶ್ ರೈನಾ, 'ಪರಿಶ್ರಮಪಡೋಣ, ಯಾವತ್ತೂ ಬಿಟ್ಟುಕೊಡದಿರೋಣ & ಅದಕ್ಕೆ ತಕ್ಕಾಗೆ ಪ್ರತಿಫಲ ಪಡೆಯೋಣ,' ಎಂದು ಬರೆದುಕೊಂಡಿದ್ದಾರೆ.
ರೈನಾ ಪೋಸ್ಟ್ ಮಾಡುತ್ತಿರುವ ಮೂರನೇ ಅಭ್ಯಾಸದ ವೀಡಿಯೋ ಇದು. ಶುಕ್ರವಾರದ ವೀಡಿಯೋದಲ್ಲಿ ಪಂತ್, ರೈನಾ ಅಭ್ಯಾಸ ನಡೆಸುತ್ತಿರುವ ಸಣ್ಣ ವೀಡಿಯೋ ಇತ್ತು. ಭಾನುವಾರ ರೈನಾ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿ, ಎಲ್ಲರೂ ಒಳ್ಳೆಯ ವೀಕೆಂಡ್ ಅನುಭವಿಸುತ್ತಿದ್ದೀರಿ ಎಂದು ಭಾವಿಸಿದ್ದೇನೆ,' ಎಂದು ಬರೆದುಕೊಂಡಿದ್ದರು.