ಮುಂಬೈ, ಸೆಪ್ಟೆಂಬರ್, 06: ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ಥಂಭ ಸುರೇಶ್ ರೈನಾ ಬ್ಯಾಟ್ ಕೆಳಗಿಟ್ಟು ಮೈಕ್ ಕೈಗೆ ತೆಗೆದುಕೊಂಡಿದ್ದಾರೆ. ಚಾಕೋಲೇಟ್ ಹೀರೋ ಹಾಗಿರುವ ರೈನಾ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿಲ್ಲ, ಬದಲಾಗಿ ಬಾಲಿವುಡ್ ಚಿತ್ರಕ್ಕೆ ಹಾಡೊಂದನ್ನು ಹಾಡಲಿದ್ದಾರೆ.
ಮೀರುತಿಯಾ ಗ್ಯಾಂಗ್ಸ್ಟರ್ಸ್ ಎಂಬ ಚಿತ್ರದ ವಿಶೇಷ ಗೀತೆಯನ್ನು ರೈನಾ ಹಾಡಲಿದ್ದಾರೆ. ಚಿತ್ರದ ನಿರ್ಮಾಪಕ ಶೊಯೆಬ್ ಅಹ್ಮದ್ ರೈನಾ ಕುಟುಂಬಕ್ಕೆ ಆತ್ಮೀಯರಾಗಿದ್ದು ರೈನಾ ಬಳಿ ಹಾಡೊಂದನ್ನು ಹಾಡಲು ಕೇಳಿಕೊಂಡಿದ್ದರು. ಅದಕ್ಕೆ ರೈನಾ ಒಪ್ಪಿಗೆ ಸೂಚಿಸಿದ್ದು ಗಾಯನ ಮಾಡಲಿದ್ದಾರೆ.[ಪ್ರಿಯಾಂಕಾ ಜತೆ ಸುರೇಶ್ ರೈನಾ ಪ್ಯಾರಿಸ್ ಪ್ರಣಯ]
ಝೈಝಾನ್ ಖಾದ್ರಿ ನಿರ್ದೇಶಿಸಿರುವ ಕ್ರೈಂ-ಕಾಮೆಡಿ ಚಿತ್ರ ಮೀರುತಿಯಾ ಗ್ಯಾಂಗ್ಸ್ಟರ್ಸ್ ಮೂಲಕ ಸುರೇಶ್ ರೈನಾ ಬಾಲಿವುಡ್'ಗೆ ಗಾಯಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
ಮದುವೆಯಾದ ಮೇಲೆ ಹೆಂಡತಿಗಾಗಿ ಹಾಡುತ್ತಿದ್ದೆ. ಹಾಡುವುದು ನಾನು ಬೆಳೆಸಿಕೊಂಡು ಬಂದ ಹವ್ಯಾಸ. ಇದೀಗ ಅವಳ ಒಪ್ಪಿಗೆಯನ್ನು ಪಡೆದುಕೊಂಡೇ ಚಲನಚಿತ್ರವೊಂದಕ್ಕೆ ಗಾಯನ ಮಾಡುತ್ತಿದ್ದೇನೆ ಎಂದು 28 ವರ್ಷದ ಎಡಗೈ ದಾಂಡಿಗ ಹೇಳುತ್ತಾರೆ.
ಕ್ರಿಕೆಟಿಗರು ಬಾಲಿವುಡ್ ಗೆ ಪ್ರವೇಶ ಮಾಡುತ್ತಿರುವುದು ಹೊಸದೇನಲ್ಲ. ಅಜಯ್ ಜಡೇಜಾ, ವಿನೋದ್ ಕಾಂಬ್ಳಿ ಸಹ ನಟನೆಯಲ್ಲಿ ಒಂದು ಪ್ರಯತ್ನ ಮಾಡಿದ್ದರು. ಇದೀಗ ಸುರೇಶ್ ರೈನಾ ಕೈಗೆ ಮೈಕ್ ಹಿಡಿಸಲಾಗಿದೆ.