
ಬಾಲಿವುಡ್‌ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಾತ್ರದಲ್ಲಿ ಮಿಂಚಿದ್ದ ಸುಶಾಂತ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಬಾಲಿವುಡ್ ಮೀರಿ ಕ್ರಿಕೆಟ್‌ಲೋಕದಲ್ಲೂ ಸುಶಾಂತ್ ಸ್ನೇಹವನ್ನು ಗಳಿಸಿಕೊಂಡಿದ್ದರು.
34 ವರ್ಷದ ನಟನ ಈ ಸಾವು ಸಿನಿ ಪ್ರೇಮಿಗಳನ್ನು ಆಘಾತಗೊಳಿಸಿದೆ. ಸಣ್ಣ ವಯಸ್ಸಿನಲ್ಲಿ ಸುಶಾಂತ್ ಸಿಂಗ್ ರಜಪೂತ್ ತೆಗೆದುಕೊಂಡ ಈ ನಿರ್ಧಾರ ಬಾಲಿವುಡ್ ಮಾತ್ರವಲ್ಲ ಕ್ರಿಕೆಟ್ ಲೋಕವನ್ನೂ ಆಘಾತಗೊಳಿಸಿದೆ. ಅನೇಕ ಕ್ರೀಡಾ ತಾರೆಯರು ಸುಶಾಂತ್ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್‌ನಲ್ಲಿ ಸುಶಾಂತ್ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ. 'ಸುಶಾಂತ್ ಸಿಂಗ್ ರಜಪೂತ್ ವಿಚಾರ ಕೇಳಿ ಆಘಾತವಾಗಿದೆ. ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಮತ್ತು ಸ್ಬೇಹಿತರಿಗೆ ಈ ನೋವನ್ನು ಸಹಿಸುವ ಶಕ್ತಿ ದೇವರು ನೀಡಲಿ' ಎಂದು ಬರೆದುಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಯುವ ನಟನ ಅಗಲಿಕೆಗೆ ದುಃಖ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಆತನೋರ್ವ ಅದ್ಭುತ ನಟನಾಗಿದ್ದರು. ಆತನ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ನನ್ನ ಸಂತಾಪಗಳು ಎಂದು ಸಚಿನ್ ನುಡಿನಮನ ಸಲ್ಲಿಸಿದ್ದಾರೆ.
ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಪಾಕಿಸ್ತಾನ ಕ್ರಿಕೆಟ್‌ನ ಹಿರಿಯ ಆಟಗಾರ ಶೋಯೆಬ್ ಮಲಿಕ್, ಟೀಮ್ ಇಂಡಿಯಾ ಮಾಜಿ ಆಟಗಾರರದ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಅಂಜುಮ್ ಚೋಪ್ರಾ, ಮಿಥಾಲಿ ರಾಜ್, ಹರ್ಭಜನ್ ಸಿಂಗ್ ಸೇರಿದಂತೆ ಅನೇಕರು ಆಘಾತ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ.