ಏಷ್ಯಾ ಕಪ್ ಟಿ20 ಟೂರ್ನಿ ಮುಗಿದು ಇಂದಿಗೆ ಎರಡು ದಿನಗಳೇ ಕಳೆದಿವೆ. ಆದರೂ ಈ ಟೂರ್ನಿಯ ಸುದ್ದಿಗಳು ಚರ್ಚೆಗಳು ಈಗಲೂ ನಡೆಯುತ್ತಲೇ ಇವೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್‌ಗಳಿಂದ ಜಯ ಸಾಧಿಸಿತು. ಈ ಬಳಿಕ ಟೀಮ್ ಇಂಡಿಯಾ ಪ್ರಶಸ್ತಿ ವಿತರಣಾ ಸಮಾರಂಭವನ್ನು ಬಹಿಷ್ಕರಿಸಿತು. ಅಲ್ಲಿಂದ ಹೈಡ್ರಾಮಾ ಆರಂಭವಾಯಿತು. ಈ ಕುರಿತಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ. ಈ ಸಾಲಿಗೆ ಕರ್ನಾಟಕದ ಸೈಯದ್ ಕಿರ್ಮಾನಿ ಸಹ ಸೇರಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ನೈತಿಕತೆ ಕುಸಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸೈಯದ್ ಕಿರ್ಮಾನಿ ಅವರು ಮೈದಾನದಲ್ಲಿ ಕ್ರೀಡಾ ಮನೋಭಾವದ ಕೊರತೆ ಎದ್ದು ಕಂಡಿದೆ ಎಂದು ನಿರಾಸೆ ವ್ಯಕ್ತ ಪಡಿಸಿದ್ದಾರೆ. ಕ್ರಿಕೆಟ್ ಮೈದಾನದಿಂದ ಸಜ್ಜನಿಕೆ ಮಾಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಮೈದಾನದಲ್ಲಿ ಆಟಗಾರರು ಅಸಭ್ಯತೆ ಹಾಗೂ ದುರಹಂಕಾರದಿಂದ ವರ್ತಿಸಿದ್ದಾರೆ. ನಾವು ಆಡುವಾಗ ಪರಿಸ್ಥಿತಿ ಬೇರೆ ತರನಾಗಿ ಇತ್ತು. ಈಗ ಮೈದಾನಕ್ಕೆ ರಾಜಕೀಯ ಎಂಟ್ರಿ ಆಗಿದೆ ಎಂದು ದೂಷಿಸಿದ್ದಾರೆ.

ಫೈನಲ್ ಪಂದ್ಯದ ಬಳಿಕ ವಿದೇಶದಲ್ಲಿರುವ ನನ್ನ ಸ್ನೇಹಿತರು ನನಗೆ ಈ ಬಗ್ಗೆ ಕೇಳಿದರು. ನನಗೆ ಅವರು ಹೇಳುವ ಮಾತುಗಳನ್ನು ಕೇಳಿ ಬೇಸರವಾಯಿತು. ಏಷ್ಯಾ ಕಪ್ ನಡೆದ ರೀತಿ ಕೆಟ್ಟದಾಗಿದೆ. ಇದಕ್ಕೆ ಭಾರತವೂ ಕಾರಣ ಎಂದಿದ್ದಾರೆ. ಇನ್ನು ತಾವು ಆಡುತ್ತಿದ್ದಾಗ ಭಾರತ ಹಾಗೂ ಪಾಕಿಸ್ತಾನ ನಡುವಣ ಆಟಗಾರರ ನಡುವೆ ಸಂಬಂಧ ಹೇಗಿತ್ತು ಎಂಬುದರ ಬಗ್ಗೆಯೂ ಸೈಯದ್ ವಿವರಿಸಿದ್ದಾರೆ. ನಾವು ಆಡುವಾಗ ಭಾರತ-ಪಾಕ್ ಆಟಗಾರರ ನಡುವೆ ಸಹೋದರತ್ವ ಇತ್ತು. ಮೈದಾನದಲ್ಲಿ ನಾವು ಗೆಲುವಿಗಾಗಿ ಹೋರಾಡುತ್ತಿದ್ದೇವು. ಆದರೆ ಮೈದಾನದ ಹೊರಗೆ ನಾವೆಲ್ಲಾ ಒಟ್ಟಾಗೆ ಇರುತ್ತಿದ್ದವು. ಅಲ್ಲಿನ ಆಟಗಾರರು ಇಲ್ಲಿಗೆ ಬರುತ್ತಿದ್ದರು. ನಾವು ಅಲ್ಲಿಗೆ ಹೋಗುತ್ತಿದ್ದೇವು. ಆಗ ಗೌರವ, ಆತಿಥ್ಯ ಮತ್ತು ಪ್ರೀತಿಯ ಭಾವನೆ ಇತ್ತು. ಹಳೆಯ ಸಮಯವನ್ನು ಈಗಿನ ಸಮಯೊಂದಿಗೆ ಹೋಲಿಸಿದರೆ ನಿರಾಸೆ ಆಗುತ್ತದೆ ಎಂದಿದ್ದಾರೆ.
ಕರ್ನಾಟದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಸೈಯದ್ ಕಿರ್ಮಾನಿ ದೇಶವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿದ್ದಾರೆ.ಅಲ್ಲದೆ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದಾರೆ. ಇವರು 1976 ರಿಂದ 1986ರ ವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ವೇಳೆ 49 ಏಕದಿನ ಪಂದ್ಯಗಳಲ್ಲಿ 373 ರನ್ ಬಾರಿಸಿದರೆ, 88 ಟೆಸ್ಟ್ ಪಂದ್ಯಗಳಲ್ಲಿ 2759 ರನ್ ಕಲೆ ಹಾಕಿದ್ದಾರೆ.