SMAT 2024: ಒಂದೇ ಪಂದ್ಯದಲ್ಲಿ 37 ಸಿಕ್ಸ್... ಆರ್‌ಸಿಬಿ ಪ್ಲೇಯರ್ ಕ್ರುನಾಲ್ ಮುಂದಾಳತ್ವದಲ್ಲಿ ವಿಶ್ವ ದಾಖಲೆ!
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಬರೋಡಾ ತಂಡ ಇತಿಹಾಸವನ್ನು ಸೃಷ್ಟಿಸಿದೆ. ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಬರೋಡ ತಂಡವು ನಿಗದಿತ 20 ಓವರ್‌ಗಳಲ್ಲಿ 349 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಮಾಡಿದ ವಿಶ್ವದಾಖಲೆ ಬರೆದಿದೆ. ಬರೋಡಾದ ಬ್ಯಾಟರ್‌ಗಳ ಬಿರುಸಿನ ಬ್ಯಾಟಿಂಗ್ ಬಲದಿಂದ ಈ ಬೃಹತ್ ಮೊತ್ತ ಕಲೆ ಹಾಕಲಾಗಿದೆ. ಇದಕ್ಕೂ ಮುನ್ನ, ಈ ವರ್ಷ ಗ್ಯಾಂಬಿಯಾ ತಂಡದ ವಿರುದ್ಧ ಜಿಂಬಾಬ್ವೆ ಬ್ಯಾಟರ್‌ಗಳು 20 ಓವರ್‌ಗಳಲ್ಲಿ 344 ರನ್ ಗಳಿಸಿದ್ದರು. ಇದು ಇಲ್ಲಿವರೆಗೆ ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಮೊತ್ತವಾಗಿತ್ತು.
ಇಂದೋರ್ ನ ಎಮರೆಲ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಗ್ರೂಪ್-ಬಿ ಯ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಸಿಕ್ಕಿಂ ವಿರುದ್ಧ ಟಾಸ್ ಗೆದ್ದು ಮೊದಲ ಬರೋಡಾ ಬ್ಯಾಟಿಂಗ್ ಮಾಡಿತ್ತು. ಪವರ್ ಪ್ಲೇನಲ್ಲಿ ಮೊದಲ ವಿಕೆಟ್‌ಗೆ ಬರೋಡ ತಂಡ 5.1 ಓವರ್‌ಗಳಲ್ಲಿ 92 ರನ್ ಗಳಿಸುವ ಮೂಲಕ ಅದ್ಭುತ ಆರಂಭ ಪಡೆಯಿತು. ಶಾಶ್ವತ್ ರಾವತ್ 16 ಎಸೆತಗಳಲ್ಲಿ 43 ರನ್ ಬಾರಿಸಿದರೆ, ಅಭಿಮನ್ಯು ಸಿಂಗ್ ರಜಪೂತ್ 17 ಎಸೆತ 53 ರನ್ ಚಚ್ಚಿ ಹಾಕಿದರು. ಇದರೊಂದಿಗೆ ಈ ಇಬ್ಬರು ಬ್ಯಾಟರ್‌ಗಳು ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈದರು. ರಾವತ್ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರೆ, ಅಭಿಮನ್ಯು 4 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದರು.

ಇದಾದ ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಭಾನು ಪನಿಯಾ ಅವರು ಸಿಕ್ಕಿಂ ಬೌಲರ್‌ಗಳಿಗೆ ಮನಬಂದಂತೆ ಸಿಕ್ಸರ್‌ಗಳನ್ನು ಹೊಡೆದರು. ಭಾನು ಕೇವಲ 51 ಎಸೆತಗಳಲ್ಲಿ 4 ಬೌಂಡರಿ ಮತ್ತು 15 ಸಿಕ್ಸರ್‌ಗಳೊಂದಿಗೆ ಅಜೇಯ 134 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶಿವಾಲಿಕ್ ಶರ್ಮಾ ಮತ್ತು ವಿಷ್ಣು ಸೋಲಂಕಿ ಕೂಡ ಬಿರುಸಿನ ಅರ್ಧಶತಕ ಸಿಡಿಸಿ ಮಿಂಚಿದರು. ಶಿವಾಲಿಕ್ 17 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಮತ್ತೊಂದೆಡೆ ಸಿಕ್ಕಿಂ ಬೌಲರ್‌ಗಳನ್ನು ಬೆಂಡೆತ್ತಿದ
ವಿಷ್ಣು ಕೇವಲ 16 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 50 ರನ್ ಗಳಿಸಿದರು.
ಸಿಕ್ಕಿಂ ಪರ ರೋಷನ್ ಕುಮಾರ್ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 2 ವಿಕೆಟ್ ಪಡೆಯುವ ಮೂಲಕ 81 ರನ್ ನೀಡಿದರು. ಬರೋಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 349 ರನ್ ಕಲೆ ಹಾಕಿತು. 350 ರನ್‌ಗಳ ಗುರಿ ಬೆನ್ನಟ್ಟಿದ ಸಿಕ್ಕಿಂ ತಂಡವನ್ನು ಬರೋಡ ಕಟ್ಟಿ ಹಾಕಿತು. ಸಿಕ್ಕಿಂ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 87 ರನ್ ಗಳಿಸಿತು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications