ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಸೋಲಿನೊಂದಿಗೆ ಕರ್ನಾಟಕ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ. ಗುಜರಾತ್ ವಿರುದ್ಧ ಮಯಾಂಕ್ ಅಗರ್ವಾಲ್ ಮುಂದಾಳತ್ವದ ಕರ್ನಾಟಕ ತಂಡ 48 ರನ್‌ಗಳಿಂದ ಸೋಲು ಕಂಡಿದೆ. ಕರ್ನಾಟಕ ಉತ್ತಮ ಆರಂಭ ಪಡೆದ ಹೊರತಾಗಿಯೂ ಗುಜರಾತ್ ನೀಡಿದ 252 ರನ್‌ಗಳ ಗುರಿ ಮುಟ್ಟುವಲ್ಲಿ ವಿಫಲಾಗಿದೆ. 19.1 ಓವರ್‌ಗಳಲ್ಲಿ 203 ರನ್‌ಗೆ ಕರ್ನಾಟಕ ಆಲೌಟ್ ಆಗಿದೆ.
ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಸ್ಮರಣ್ ರವಿಚಂದ್ರನ್ ಗೆಲುವಿಗಾಗಿ ಹೋರಾಡಿದರು. ಆದರೆ ಮತ್ತೊಂದು ತುದಿಯಿಂದ ಇವರಿಗೆ ಬೇರೆ ಯಾವ ಬ್ಯಾಟರ್ ಬೆಂಬಲವೂ ಸಿಗಲಿಲ್ಲ. ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್‌ಗಳು ರನ್ ಹೊಳೆ ಹರಿಸಲಿಲ್ಲ. ಹೀಗಾಗಿ ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಿಂದ ಕರ್ನಾಟಕ ತಂಡ ಹೊರಗುಳಿದಿದೆ.

ಈ ಪಂದ್ಯದಲ್ಲಿ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಆದರೆ, ಮಯಾಂಕ್ ಅಗರ್ವಾಲ್ ಅಂದುಕೊಂಡಂತೆ ಕರ್ನಾಟಕ ಬೌಲರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಗುಜರಾತ್ ಪರ ಆರ್ಯ ದೇಸಾಯಿ ಮತ್ತು ಉರ್ವಿಲ್ ಪಟೇಲ್ ಅದ್ಭುತ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 3.3 ಓವರ್‌ಗಳಲ್ಲಿ 44 ರನ್ ಕಲೆ ಹಾಕಿದರು. ಉರ್ವಿಲ್ ಪಟೇಲ್ 33 ರನ್ ಗಳಿಸಿ ಔಟಾದರು. ನಂತರ ಒಂದಾದ ಆರ್ಯ ದೇಸಾಯಿ ಮತ್ತು ಅಭಿಷೇಕ್ ದೇಸಾಯಿ ಕರ್ನಾಟಕ ಬೌಲರ್‌ಗಳನ್ನು ಬೆಂಡೆತ್ತಿದರು.
ಆರ್ಯ ದೇಸಾಯಿ 40 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 73 ರನ್ ಬಾರಿಸಿದರು. ಅಭಿಷೇಕ್ ದೇಸಾಯಿ 32 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 47 ರನ್ ಗಳಿಸಿದರು. ಮತ್ತೊಂದೆಡೆ ಅಬ್ಬರಿಸಿದ ನಾಯಕ ಅಕ್ಸರ್ ಪಟೇಲ್ ಅರ್ಧಶತಕ ಸಿಡಿಸಿ ಮಿಂಚಿದರು. ಅಕ್ಸರ್ 20 ಎಸೆತಗಳಲ್ಲಿ 2 ಬೌಂಡರಿ ಹಾಗು 6 ಸಿಕ್ಸರ್ ಮೂಲಕ 56 ರನ್ ಕಲೆ ಹಾಕಿದರು. ಹೀಗಾಗಿ ಗುಜರಾತ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತು.
ಗುಜರಾತ್ ನೀಡಿದ 252 ರನ್‌ಗಳನ್ನು ಬೆನ್ನಟ್ಟಿದ ಕರ್ನಾಟಕ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರವಾಲ್ ಅರ್ಧಶತಕದ ಜೊತೆಯಾಟವಾಡಿದರು. ಅದ್ಭುತವಾಗಿ ಆಡುತ್ತಿದ್ದ ಮನೀಶ್ ಪಾಂಡೆ 30 ರನ್ ಗಳಿಸಿ ಔಟ್ ಆದರು. ನಂತರ ಮಯಾಂಕ್ ಅಗರವಾಲ್ ಮತ್ತು ಕೃಷ್ಣನ್ ಶ್ರೀಜಿತ್ ನಡುವೆ ಕೂಡ ಭರ್ಜರಿ ಜೊತೆಯಾಟ ಕಂಡುಬಂತು. ಆದರೆ, ರವಿ ಬಿಷ್ಣೋಯ್ ಒಂದೇ ಓವರ್‌ನಲ್ಲಿ ಮಯಾಂಕ್ ಅಗರವಾಲ್ (45) ಮತ್ತು ಕೃಷ್ಣನ್ ಶ್ರೀಜಿತ್ (26) ಔಟ್ ಮಾಡುವ ಮೂಲಕ ಕರ್ನಾಟಕಕ್ಕೆ ಶಾಕ್ ಕೊಟ್ಟರು.
ಕರ್ನಾಟಕ ಒಂದು ಓವರ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡರು ಸ್ಮರಣ್ ರವಿಚಂದ್ರನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ದುರದೃಷ್ಟಕರ ಅರ್ಧಶತಕದ ಹೊಸ್ತಿಲಲ್ಲಿ ಸ್ಮರಣ್ ರವಿಚಂದ್ರನ್ ವಿಕೆಟ್ ಕಳೆದುಕೊಂಡರು. ಸ್ಮರನ್ 21 ಎಸೆತಗಳಲ್ಲಿ 1 ಬೌಂಡರಿ ಮತ್ತು 6 ಸಿಕ್ಸರ್ ಬಲದಿಂದ 49 ರನ್ ಬಾರಿಸಿದರು. ನಂತರ ಬಂದ ಯಾವುದೇ ಬ್ಯಾಟರ್ ತಂಡದ ಗೆಲುವಿಗೆ ದಿಟ್ಟ ಹೋರಾಟ ನಡೆಸಲಿಲ್ಲ. ಹೀಗಾಗಿ ಕರ್ನಾಟಕ 203 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.