
ಮುಂಬೈ, ನವೆಂಬರ್ 17: ಡೋಪಿಂಗ್ ಪ್ರಕರಣದಲ್ಲಿ ಸಿಲುಕಿ ಸುಮಾರು ಎಂಟು ತಿಂಗಳುಗಳ ಮೈದಾನದಿಂದ ಹೊರಗುಳಿದಿದ್ದ ಯುವ ಪ್ರತಿಭೆ ಪೃಥ್ವಿ ಶಾ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಕಮ್ ಬ್ಯಾಕ್ ಪಂದ್ಯದಲ್ಲಿ ಭರ್ಜರಿಯಾಗಿ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಭಾನುವಾರದಂದು ನಡೆದ ಪಂದ್ಯದಲ್ಲಿ ಮುಂಬೈ ಪರ ತ್ವರಿತಗತಿಯಲ್ಲಿ ಅರ್ಧ ಶತಕ ದಾಖಲಿಸಿ, ತಂಡದ ಗೆಲುವಿಗೆ ತಮ್ಮ ಕೊಡುಗೆ ನೀಡಿದ್ದಾರೆ.
ಮುಂಬೈ ಹಾಗೂ ಅಸ್ಸಾಂ ನಡುವಿನ ಪಂದ್ಯದಲ್ಲಿ 39 ಎಸೆತಗಳಲ್ಲಿ 63 ರನ್(7 ಬೌಂಡರಿ ಮತ್ತು 2 ಸಿಕ್ಸರ್ ) ಚೆಚ್ಚಿದ 20 ವರ್ಷ ವಯಸ್ಸಿನ ಪೃಥ್ವಿ ಶಾ, ತಂಡವು 83ರನ್ ಗಳಿಂದ ಗೆಲುವು ಸಾಧ್ಯವಾಯಿತು.
ಪೃಥ್ವಿ ಜೊತೆಗೆ ಆದಿತ್ಯಾ ತಾರೆ(48ಎಸೆತಗಳಲ್ಲಿ 82 ರನ್) ಉತ್ತಮ ಸಾಥ್ ನೀಡಿದರು. ಇಬ್ಬರು 138ರನ್ ಇಬ್ಬರು ಸೇರಿ ತಂಡದ ಮೊತ್ತವನ್ನು 206/5ಕ್ಕೇರಿಸಿದರು.
207 ರನ್ ಬೆನ್ನು ಹತ್ತಿದ ಅಸ್ಸಾಂ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 123 ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಮುಂಬೈ ಪರ ಶಿವಂ ದುಬೆ 2/3, ಧವಳ್ ಕುಲಕರ್ಣಿ 2/28, ಶಾಮ್ಸ್ ಮುಲಾನಿ 2/15 ವಿಕೆಟ್ ಗಳಿಸಿದರು.
ಈ ನಡುವೆ ಮೇಘಾಲಯದ ಆಲ್ ರೌಂಡರ್ ಅಭಯ್ ನೇಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ತ್ವರಿತಗತಿಯ ಅರ್ಧಶತಕ ಗಳಿಸಿದರು. 14 ಎಸೆತಗಳಲ್ಲಿ ನೇಗಿ ಅರ್ಧಶತಕ ಗಳಿಸುವ ಮೂಲಕ ರಾಬಿನ್ ಉತ್ತಪ್ಪ ಅವರ ದಾಖಲೆ ಅಳಿಸಿದ್ದಾರೆ. ಮೇಘಾಲಯ 207/4 ಸ್ಕೋರ್, ಮಿಜೋರಾಂ 182/2ಸ್ಕೋರ್.