
ಸಿಡ್ನಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಪರ ಆಡುವ ಭಾರತದ ವೇಗಿ ಟಿ ನಟರಾಜನ್‌ಗೆ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್‌ಗೆ ಕರೆ ನೀಡಿರುವುದು ಎಸ್‌ಆರ್‌ಎಚ್ ನಾಯಕ ಡೇವಿಡ್ ವಾರ್ನರ್‌ಗೆ ಖುಷಿ ನೀಡಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಟರಾಜನ್ ಹೇಗೆ ಆಡುತ್ತಾರೆ ಅನ್ನೋದು ಗೊತ್ತಿಲ್ಲ ಎಂದು ವಾರ್ನರ್ ಹೇಳಿದ್ದಾರೆ.
ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯಶಸ್ವಿ ಕಾಣಲು ಬೇಕಾದ ಕೌಶಲಗಳು ಟಿ ನಟರಾಜನ್ ಅವರಲ್ಲಿದೆ. ಆದರೆ ಸಾಂಪ್ರದಾಯಿಕ ಕ್ರಿಕೆಟ್ ಮಾದರಿ ಟೆಸ್ಟ್‌ನಲ್ಲೂ ನಟರಾಜನ್ ಯಶಸ್ವಿ ಕಾಣುತ್ತಾರೋ ಅನ್ನೋದು ಪಕ್ಕಾ ಹೇಳಲಾಗುತ್ತಿಲ್ಲ ಎಂದು ವಾರ್ನರ್ ಹೇಳಿದ್ದಾರೆ.
ಆಸ್ಟ್ರೇಲಿಯಾ-ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳು ಮುಗಿದಿದ್ದು, ಇತ್ತಂಡಗಳು 1-1ರ ಸಮಬಲ ಸಾಧಿಸಿವೆ. ನಡೆದ ಎರಡೂ ಪಂದ್ಯಗಳಲ್ಲೂ ಡೇವಿಡ್ ಮತ್ತು ನಟರಾಜನ್ ಆಡಿರಲಿಲ್ಲ. ಆದರೆ ಮೂರನೇ ಟೆಸ್ಟ್ ಮೂಲಕ ನಟರಾಜನ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇತ್ತ ವಾರ್ನರ್ ಕೂಡ 3ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಟಿ20 ಕ್ರಿಕೆಟ್‌ನ ಯಶಸ್ವಿಯನ್ನು ನಟರಾಜನ್ ಟೆಸ್ಟ್‌ಗೂ ತರುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವಾರ್ನರ್, 'ಒಳ್ಳೆಯ ಪ್ರಶ್ನೆ. ಆದರೆ ನನಗೆ ಸಂಪೂರ್ಣ ಖಾತ್ರಿಯಿಲ್ಲ. ನಿಮಗೆ ಅವರ ರಣಜಿ ಟ್ರೋಫಿ ಅಂಕಿ-ಅಂಶಗಳು ಗೊತ್ತಿರಬಹುದು. ಅವರಿಗೆ ಒಳ್ಳೆಯ ಲೈನ್, ಲೆಂತ್ ಇದೆ ಅನ್ನೋದು ಗೊತ್ತಿದೆ. ಆದರೆ ಟೆಸ್ಟ್‌ನಲ್ಲಿ ಬೆನ್ನು ಬೆನ್ನಿಗೆ ಓವರ್ ಇರುತ್ತವೆಲ್ಲ? ಹೀಗಾಗಿ ನನಗೆ 100 ಶೇ. ಹೇಳಲಾಗುತ್ತಿಲ್ಲ,' ಎಂದಿದ್ದಾರೆ.