ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಬುಧವಾರ (ಜನವರಿ 22) ನಡೆಯಲಿದೆ. ಇಂಗ್ಲೆಂಡ್ ವಿರುದ್ದದ ಟಿ20 ಸರಣಿ ಆರಂಭಕ್ಕೂ ಮುನ್ನವೇ ಹಲವು ಆಟಗಾರರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೊಹಮ್ಮದ್ ಶಮಿ ಕಮ್ ಬ್ಯಾಕ್, ಹಾರ್ದಿಕ್ ಪಾಂಡ್ಯ ಮತ್ತು ಸಂಜು ಸ್ಯಾಮ್ಸನ್ ಫಾರ್ಮ್ ಮತ್ತು ಸೂರ್ಯಕುಮಾರ್ ಯಾದವ್ ನಾಯಕತ್ವದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದಲ್ಲದೆ, ಒಬ್ಬ ಆಟಗಾರನ ಪ್ರದರ್ಶನದ ಬಗ್ಗೆ ಎಲ್ಲರ ಕಣ್ಣಿದೆ. ಭಾರತ ತಂಡದಲ್ಲಿ ಆ ಆಟಗಾರನಿಗೆ ಬಹುಶಃ ಇದು ಕೊನೆಯ ಅವಕಾಶವಾಗಿರಬಹುದು.
ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಟೀಮ್ ಇಂಡಿಯಾದಲ್ಲಿ ಬದಲಾವಣೆಗಳು ನಡೆಯುತ್ತಿದೆ. ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಐಪಿಎಲ್ ಮತ್ತು ದೇಶೀಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಕಳೆದ ಕೆಲವು ತಿಂಗಳುಗಳಿಂದ ಭಾರತ ತಂಡದಲ್ಲಿ ನಿರಂತರವಾಗಿ ಅವಕಾಶಗಳನ್ನು ನೀಡಲಾಗುತ್ತಿದೆ. ಆದರೆ, ಅಭಿಷೇಕ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ.

ಅಭಿಷೇಕ್ ಶರ್ಮಾ ಮೈದಾನದ ಮೂಲೆ ಮೂಲೆಗಳಿಗೆ ಬೌಂಡರಿ ಮತ್ತು ಸಿಕ್ಸರ್ ಹೊಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜುಲೈ 2024 ರಲ್ಲಿ ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವರು 47 ಎಸೆತಗಳಲ್ಲಿ ಸ್ಫೋಟಕ ಶತಕವನ್ನು ಬಾರಿಸಿದ್ದರು. ಇದೀಗ ಅಭಿಷೇಕ್ ಟೀಮ್ ಇಂಡಿಯಾ ಪರ ಅಬ್ಬರಿಸುತ್ತಿಲ್ಲ. ಆದರೆ, ಭಾರತ ತಂಡದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಅವರು ಅಭಿಷೇಕ್ ಶರ್ಮಾ ಅವರ ಸಾಮರ್ಥ್ಯವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅಭಿಷೇಕ್ ಶರ್ಮಾ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಬೇಕು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಅಭಿಷೇಕ್ ಅವರ ಫಾರ್ಮ್ ಸ್ವಲ್ಪಮಟ್ಟಿಗೆ ಕಳೆಗೆ ಮತ್ತು ಮೇಲಿದೆ. ಆರಂಭದಲ್ಲಿ ತಮ್ಮ ಎರಡನೇ ಟಿ20 ಪಂದ್ಯದಲ್ಲಿ ಅವರು ಜಿಂಬಾಬ್ವೆ ವಿರುದ್ಧ ಶತಕ ಗಳಿಸಿದರು. ಇದಾದ ನಂತರ ಸಾಕಷ್ಟು ಭರವಸೆಯ ಆಧಾರದ ಮೇಲೆ ಸ್ಥಾನ ನೀಡಲಾಯಿತು. ಆದರೆ, ಅವರ ಆಟದಲ್ಲಿ ಕಾರ್ಯಕ್ಷಮತೆ ಇಲ್ಲ. ಹಾಗಾಗಿ ಅಭಿಷೇಕ್ ಶರ್ಮಾಗೆ ಇದು ಕೊನೆಯ ಅವಕಾಶ ಎಂದು ನಾನು ಭಾವಿಸುತ್ತೇನೆ. ನಾನು ಆ ಹುಡುಗನನ್ನು ನಿಜವಾಗಿಯೂ ಪ್ರೀತಿಸುತ್ತೇನೆ. ಅವನು ಚೆನ್ನಾಗಿ ಆಡಿದರೆ, ಅದು ಉತ್ತಮವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಸಂಜು ಸ್ಯಾಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಹೆಸರು ಮಾಡಿರುವಂತೆಯೇ ಅಭಿಷೇಕ್ ಶರ್ಮಾ ಕೂಡ ಇದೇ ಸಾಧನೆ ಮಾಡಬೇಕಿದೆ. ಇಲ್ಲದಿದ್ದರೆ ಅಭಿಷೇಕ್ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಹಿಂತಿರುಗಲಿದ್ದಾರೆ. ಇಂತಹ ಸಂದರ್ಭದಲ್ಲಿ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾದಲ್ಲಿ ಅವಕಾಶ ಕಳೆದುಕೊಳ್ಳಲಿದ್ದಾರೆ.
ಅಭಿಷೇಕ್ ಶರ್ಮಾ 12 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಶತಕ ಹೊರತುಪಡಿಸಿ 11 ಪಂದ್ಯಗಳಲ್ಲಿ 156 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವೇಗದ ಬೌಲರ್ ಮೊಹಮ್ಮದ್ ಶಮಿ ಮರಳಿರುವುದು ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವನ್ನು ಬಲಪಡಿಸಿದೆ. ನವೆಂಬರ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕ ವಿಶ್ವಕಪ್ ಫೈನಲ್‌ನಲ್ಲಿ ಶಮಿ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು.