ಟಿ20 ವಿಶ್ವಕಪ್ 2021 ಫೈನಲ್: ನ್ಯೂಜಿಲೆಂಡ್ ಸೋಲಿಸಲು ಸಿಎಸ್‌ಕೆಯ ಈ ತಂತ್ರವೇ ಕಾರಣ ಎಂದ ಫಿಂಚ್!

ಸುಮಾರು 5 ವರ್ಷಗಳ ಅಂತರದ ನಂತರ ಮರಳಿ ಬಂದಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಅಧಿಕೃತವಾಗಿ ತೆರೆಬಿದ್ದಿದೆ. ಹೌದು, ಅಕ್ಟೋಬರ್ 17ರಂದು ಆರಂಭವಾಗಿದ್ದ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯು ನವೆಂಬರ್ 14ರಂದು ನಡೆದ ಫೈನಲ್ ಪಂದ್ಯದ ಮೂಲಕ ಕೊನೆಗೊಂಡಿದೆ.
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಆಡಲು ಅರ್ಹರಾಗಿದ್ದ 12 ತಂಡಗಳ ನಡುವೆ ನಡೆದ ಸುಮಾರು 1 ತಿಂಗಳ ಮುಖಾಮುಖಿಯಲ್ಲಿ ಅಂತಿಮವಾಗಿ ಆಸ್ಟ್ರೇಲಿಯ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಹೌದು, ಆ್ಯರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡ ನವೆಂಬರ್ 14ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಫೈನಲ್ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಸದೆ ಬಡಿಯುವುದರ ಮೂಲಕ ನೂತನ ಟಿ ಟ್ವೆಂಟಿ ವಿಶ್ವಕಪ್ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ.
ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನ ಟೂರ್ನಿಯಲ್ಲಿ ಯಾವ ತಂಡಗಳು ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲಿವೆ ಮತ್ತು ಫೈನಲ್ ಸುತ್ತಿಗೆ ಯಾವ ತಂಡಗಳು ಲಗ್ಗೆ ಇಡಬಹುದು ಹಾಗೂ ಟ್ರೋಫಿಯನ್ನು ಯಾವ ತಂಡ ಎತ್ತಿ ಹಿಡಿಯಬಹುದು ಎನ್ನುವುದರ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರೀಡಾ ಪಂಡಿತರು ತಮ್ಮ ತಮ್ಮ ಊಹೆಗಳನ್ನು ಹೇಳತೊಡಗಿದ್ದರು. ಹೀಗೆ ಈ ಬಾರಿ ಉತ್ತಮ ಪ್ರದರ್ಶನವನ್ನು ನೀಡಲಿರುವ ಮತ್ತು ಟ್ರೋಫಿ ಎತ್ತಿ ಹಿಡಿಯಲಿರುವ ತಂಡಗಳನ್ನು ಊಹಿಸಿದ್ದವರ ಪೈಕಿ ಬಹುತೇಕರು ಆಸ್ಟ್ರೇಲಿಯಾ ತಂಡವನ್ನು ಗಣನೆಗೆ ತೆಗೆದುಕೊಂಡೇ ಇರಲಿಲ್ಲ. ಆದರೆ ಇದಕ್ಕೆಲ್ಲ ತನ್ನ ಪ್ರದರ್ಶನದ ಮೂಲಕ ಉತ್ತರ ನೀಡಿದ ಆಸ್ಟ್ರೇಲಿಯಾ ಸೂಪರ್ 12 ಹಂತದಲ್ಲಿ ಉತ್ತಮ ನೆಟ್ ರನ್ ರೇಟ್ ಪಡೆದುಕೊಳ್ಳುವುದರ ಮೂಲಕ ಯಶಸ್ವಿಯಾಗಿ ಸೆಮಿಫೈನಲ್ ಹಂತವನ್ನು ತಲುಪಿತು ನಂತರ ಸೆಮಿಫೈನಲ್ ಸುತ್ತಿನಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲುಣಿಸುವುದರ ಮೂಲಕ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿತು.
ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಗೆದ್ದು ಈಗ ನೂತನ ಚಾಂಪಿಯನ್ ಎನಿಸಿಕೊಂಡಿದೆ. ಹೀಗೆ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯ ಮುಗಿದ ನಂತರ ತಮ್ಮ ಗೆಲುವಿನ ಕುರಿತು ಮಾತನಾಡಿದ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ತಮ್ಮ ಗೆಲುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಂತ್ರ ಎಷ್ಟರ ಮಟ್ಟಿಗೆ ಪ್ರಭಾವವನ್ನು ಬೀರಿತು ಎಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಜೋಶ್ ಹೇಜಲ್‌ವುಡ್ ಚೆನ್ನೈ ಸೂಪರ್ ಕಿಂಗ್ಸ್ ಅನುಭವ ಬೌಲಿಂಗ್ ವಿಭಾಗಕ್ಕೆ ಸಹಾಯ ಮಾಡಿತು
ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಮಾತನಾಡಿದ ಆ್ಯರನ್ ಫಿಂಚ್ ತಮ್ಮ ತಂಡದ ಪ್ರಮುಖ ಜೋಶ್ ಹೇಜಲ್‌ವುಡ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದು ಪಡೆದುಕೊಂಡ ಅನುಭವ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಬೌಲಿಂಗ್ ವಿಭಾಗಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿತು ಎಂದು ಹೇಳಿಕೆ ನೀಡಿದ್ದಾರೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿ ಅನುಭವವನ್ನು ಹೊಂದಿದ್ದ ಜೋಶ್ ಹೇಜಲ್‌ವುಡ್ ಅವರಿಗೆ ಎಷ್ಟು ಅಂತರದಲ್ಲಿ ಚೆಂಡನ್ನು ಎಸೆಯಬೇಕು ಮತ್ತು ಅಂತಿಮ ಓವರ್‌ಗಳಲ್ಲಿ ಯಾವ ರೀತಿಯ ಎಸೆತಗಳನ್ನು ಎಸೆಯಬೇಕು ಎಂಬುದರ ಕುರಿತು ಚೆನ್ನೈ ಪಾಳಯದಲ್ಲಿ ಕಲಿತಿದ್ದ ಪಾಠದ ಕುರಿತು ನಿಖರವಾದ ಮಾಹಿತಿ ಇತ್ತು. ಇದನ್ನು ಜೋಶ್ ಹೇಜಲ್‌ವುಡ್ ಇತರರಿಗೆ ರವಾನಿಸಿದ್ದು ಮತ್ತು ಟೂರ್ನಿಯುದ್ದಕ್ಕೂ ಬಳಕೆ ಮಾಡಿದ್ದು ಆಸ್ಟ್ರೇಲಿಯಾ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿತು ಎಂದು ಆರನ್ ಫಿಂಚ್ ಶ್ಲಾಘಿಸಿದ್ದಾರೆ.

ಟೂರ್ನಿಯಲ್ಲಿ 11 ವಿಕೆಟ್ ಪಡೆದು ಮಿಂಚಿದ ಜೋಶ್ ಹೇಜಲ್‌ವುಡ್
ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯದ ಪರ 7 ಪಂದ್ಯಗಳನ್ನಾಡಿದ ಜೋಶ್ ಹೇಜಲ್‌ವುಡ್ 7.29 ಎಕಾನಮಿಯಲ್ಲಿ 11 ವಿಕೆಟ್ ಪಡೆದು ಮಿಂಚಿದರು. ಅದರಲ್ಲಿಯೂ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಜೋಶ್ ಹೇಜಲ್‌ವುಡ್ ಕೇವಲ 16 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 9 ಪಂದ್ಯಗಳನ್ನಾಡಿದ್ದ ಜೋಶ್ ಹೇಜಲ್‌ವುಡ್ 11 ವಿಕೆಟ್ ಪಡೆದಿದ್ದರು ಹಾಗೂ ಐಪಿಎಲ್ ಫೈನಲ್ ಪಂದ್ಯದಲ್ಲಿ 2 ವಿಕೆಟ್ ಪಡೆದು ಮಿಂಚಿದ್ದರು.

ಚೊಚ್ಚಲ ಟಿ ಟ್ವೆಂಟಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಇದುವರೆಗೂ ಬಹುತೇಕ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾ ಇಷ್ಟು ವರ್ಷಗಳಲ್ಲಿ ನಡೆದ ಯಾವುದೇ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿರಲಿಲ್ಲ. ಆದರೆ ಈ ಬಾರಿ ಆ ಕನಸನ್ನು ಕೂಡ ಆಸ್ಟ್ರೇಲಿಯ ತಂಡ ನನಸಾಗಿಸಿಕೊಂಡಿದ್ದು ಚೊಚ್ಚಲ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications