ನಾಯಕತ್ವದ ನಂತರ ನಂ.1 ಸ್ಥಾನವನ್ನೂ ಕಳೆದುಕೊಳ್ತಾರಾ ಕೊಹ್ಲಿ?; ಕೊಹ್ಲಿ ದಾಖಲೆ ಮೇಲಿದೆ ಆ ಆಟಗಾರನ ಕಣ್ಣು

ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಿಂದ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೂಪರ್ 12 ಹಂತದಲ್ಲಿಯೇ ಹೊರಬೀಳುವುದರ ಮೂಲಕ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿವೆ. ಹೌದು, ಟೀಮ್ ಇಂಡಿಯಾ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡದೆ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದೆ. ಟೂರ್ನಿ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಟೂರ್ನಿಯಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಹೀನಾಯವಾಗಿ ಸೋಲುವ ಮೂಲಕ ಕೆಟ್ಟ ಆರಂಭವನ್ನು ಪಡೆದುಕೊಂಡಿತು.
ಹೀಗೆ ಟೂರ್ನಿಯಲ್ಲಿ ಬಲಿಷ್ಠ ತಂಡಗಳಾದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾ ನಂತರ ನಡೆದ ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧದ ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸುವುದರ ಮೂಲಕ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿನ ತನ್ನ ಪಯಣವನ್ನು ಮುಗಿಸಿತು. ಹೌದು, ನವೆಂಬರ್ 8ರಂದು ನಡೆದ ನಮೀಬಿಯಾ ವಿರುದ್ಧದ ಪಂದ್ಯವೇ ಟೀಂ ಇಂಡಿಯಾ ಪಾಲಿಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅಂತಿಮ ಪಂದ್ಯವಾಗಿತ್ತು. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಡೆದ ಅಂತಿಮ ಟಿ ಟ್ವೆಂಟಿ ಪಂದ್ಯ ಕೂಡ ಇದಾಗಿತ್ತು. ಈ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟಿ ಟ್ವೆಂಟಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದು ಮುಂದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.
ಹೀಗೆ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ವಿಫಲವಾದರೆ, ಅತ್ತ ಪಾಕಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಯಶಸ್ವಿಯಾಗಿ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿವೆ. ಈ ತಂಡಗಳ ಪೈಕಿ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ. ಇತ್ತಂಡಗಳ ನಡುವಿನ ಈ ಪಂದ್ಯ ನವೆಂಬರ್ 10ರಂದು ಅಬುದಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದ ಮೂಲಕ ನ್ಯೂಜಿಲೆಂಡ್ ತಂಡದ ಮೂವರು ಆಟಗಾರರು ವಿಶೇಷ ಮೈಲಿಗಲ್ಲುಗಳನ್ನು ನಿರ್ಮಿಸುವ ಹಂತದಲ್ಲಿದ್ದಾರೆ. ಹೀಗೆ ನ್ಯೂಜಿಲೆಂಡ್ ಆಟಗಾರರು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಮೂಲಕ ನಿರ್ಮಿಸಬಹುದಾದ ದಾಖಲೆಗಳ ವಿವರ ಈ ಕೆಳಕಂಡಂತಿದೆ ಓದಿ.

ಕೊಹ್ಲಿ ದಾಖಲೆಯತ್ತ ಮಾರ್ಟಿನ್ ಗಪ್ಟಿಲ್ ಚಿತ್ತ
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ನ್ಯೂಜಿಲೆಂಡ್ ತಂಡದ ಪರ ಉತ್ತಮ ಪ್ರದರ್ಶನ ನೀಡಿರುವ ಮಾರ್ಟಿನ್ ಗಪ್ಟಿಲ್ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 93 ರನ್ ಗಳಿಸುವುದರ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗೆ ಉತ್ತಮ ರನ್ ಕಲೆ ಹಾಕಿರುವ ಮಾರ್ಟಿನ್ ಗಪ್ಟಿಲ್ ಇದೀಗ ವಿರಾಟ್ ಕೊಹ್ಲಿಯವರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹೌದು, ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದರೆ, ಮಾರ್ಟಿನ್ ಗಪ್ಟಿಲ್ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಮಾರ್ಟಿನ್ ಗಪ್ಟಿಲ್ ಇಬ್ಬರಿಗೂ 113 ರನ್‌ಗಳ ಅಂತರವಿದ್ದು, ಇಂದಿನ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಶತಕ ಬಾರಿಸಿದರೆ ಈ ದಾಖಲೆಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಸಾಧ್ಯತೆಗಳಿವೆ. ಅಲ್ಲದೇ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯ ಗಳಿಸಿ ಫೈನಲ್ ಹಂತಕ್ಕೆ ತಲುಪಿದರೆ ವಿರಾಟ್ ಕೊಹ್ಲಿಯ ಈ ದಾಖಲೆಯನ್ನು ಮುರಿಯಲು ಮಾರ್ಟಿನ್ ಗಪ್ಟಿಲ್ ಅವರಿಗೆ ಮತ್ತೊಂದು ಅವಕಾಶ ಲಭಿಸಲಿದೆ.
ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಟಾಪ್ 3 ಬ್ಯಾಟ್ಸ್‌ಮನ್‌ಗಳು
1. ವಿರಾಟ್ ಕೊಹ್ಲಿ: 3227 ರನ್
2. ಮಾರ್ಟಿನ್ ಗಪ್ಟಿಲ್: 3115 ರನ್
3. ರೋಹಿತ್ ಶರ್ಮಾ: 3038 ರನ್

2000 ರನ್ ಪೂರೈಸುವತ್ತ ಕೇನ್ ವಿಲಿಯಮ್ಸನ್
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 1931 ರನ್ ಕಲೆ ಹಾಕಿದ್ದು 2000 ರನ್ ಪೂರೈಸಲು ಇನ್ನೂ 69 ರನ್‌ಗಳ ಅಗತ್ಯತೆಯಿದೆ. ಕೇನ್ ವಿಲಿಯಮ್ಸನ್ ಈ ಪಂದ್ಯದ ಮೂಲಕ ಈ ಮೈಲಿಗಲ್ಲನ್ನು ಮುಟ್ಟಿದರೆ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 2000 ರನ್ ಪೂರೈಸಿದ ಮೂರನೇ ನ್ಯೂಜಿಲೆಂಡ್ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ನ್ಯೂಜಿಲೆಂಡ್ ತಂಡದ ಪರ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಟಾಪ್ 3 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ.
1. ಮಾರ್ಟಿನ್ ಗಪ್ಟಿಲ್: 3115 ರನ್
2. ಬ್ರೆಂಡನ್ ಮೆಕಲಮ್: 2140 ರನ್
3. ಕೇನ್ ವಿಲಿಯಮ್ಸನ್: 1931 ರನ್

ಲಸಿತ್ ಮಾಲಿಂಗ ಸಾರ್ವಕಾಲಿಕ ದಾಖಲೆ ಮುರಿಯುವ ಸನಿಹದಲ್ಲಿ ಟಿಮ್ ಸೌಥಿ
ಟಿಮ್ ಸೌಥಿ ಅಂತರರಾಷ್ಟ್ರೀಯ ಟ್ವೆಂಟಿ ಕ್ರಿಕೆಟ್‍ನಲ್ಲಿ ಇದುವರೆಗೂ ಒಟ್ಟು 106 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಟಿಮ್ ಸೌಥಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ಇನ್ನು 1 ವಿಕೆಟ್ ಪಡೆದರೆ ಈ ಪಟ್ಟಿಯಲ್ಲಿ ಲಸಿತ್ ಮಲಿಂಗಾ ಜೊತೆ ದ್ವಿತೀಯ ಸ್ಥಾನವನ್ನು ಹಂಚಿಕೊಳ್ಳಲಿದ್ದಾರೆ.
ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಟಾಪ್ 3 ಬೌಲರ್‌ಗಳ ಪಟ್ಟಿ ಇಲ್ಲಿದೆ.
1. ಶಕಿಬ್ ಅಲ್ ಹಸನ್: 117 ವಿಕೆಟ್‍ಗಳು
2. ಲಸಿತ್ ಮಾಲಿಂಗ: 107 ವಿಕೆಟ್‍ಗಳು
3. ಟಿಮ್ ಸೌಥಿ: 106 ವಿಕೆಟ್‍ಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications