ಟಿ20 ವಿಶ್ವಕಪ್ 2021 ಫೈನಲ್: ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ಬಲಿಷ್ಠ ಸಂಭಾವ್ಯ ತಂಡಗಳು

ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಯಶಸ್ವಿಯಾಗಿ ಫೈನಲ್ ಹಂತವನ್ನು ತಲುಪಿದೆ. ನವೆಂಬರ್ 14ರ ಭಾನುವಾರದಂದು ಸಂಜೆ 7.30ಕ್ಕೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಆ್ಯರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದರ ಮೂಲಕ ತನ್ನ ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವತ್ತ ನ್ಯೂಜಿಲೆಂಡ್ ಚಿತ್ತ ನೆಟ್ಟಿದೆ.
ಹೀಗೆ ಫೈನಲ್ ಪಂದ್ಯದಲ್ಲಿ ಸೆಣಸಾಟ ನಡೆಸಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಕೂಡ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳನ್ನು ಸೆಮಿಫೈನಲ್ ಹಂತದಲ್ಲಿ ಸದೆ ಬಡಿಯುವುದರ ಮೂಲಕ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ. ಮೊದಲಿಗೆ ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವುದರ ಮೂಲಕ ಫೈನಲ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿತು. ಅತ್ತ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಪಾಕಿಸ್ತಾನಕ್ಕೆ ಸೋಲುಣಿಸುವುದರ ಮೂಲಕ ಫೈನಲ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿದೆ.
ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನ ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪಂಡಿತರು ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಬಹುದಾದ ತಂಡಗಳನ್ನು ಊಹಿಸಿದ್ದರು. ಆದರೆ ಈ ಪೈಕಿ ಬಹುತೇಕರು ಆಸ್ಟ್ರೇಲಿಯ ತಂಡ ಸೆಮಿಫೈನಲ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಳ್ಳಲಿದೆ ಎಂದು ಊಹಿಸಿಯೇ ಇರಲಿಲ್ಲ. ಹೌದು, ಹಲವಾರು ಮಂದಿ ಆಸ್ಟ್ರೇಲಿಯಾವನ್ನು ಕಡೆಗಣಿಸಿದ್ದು ನಿಜ. ಆದರೆ ಈ ಕಡೆಗಣನೆಗೆ ತಮ್ಮ ಪ್ರದರ್ಶನದ ಮೂಲಕ ಉತ್ತರ ನೀಡಿರುವ ಆಸ್ಟ್ರೇಲಿಯಾ ಇದೀಗ ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡು ಟ್ರೋಫಿ ಎತ್ತಿಹಿಡಿಯುವಲ್ಲಿ ಚಿತ್ತ ನೆಟ್ಟಿದೆ.
ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಇದುವರೆಗೂ ಒಮ್ಮೆಯೂ ಕೂಡ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಈ ಎರಡೂ ತಂಡಗಳು ಕೂಡ ಫೈನಲ್ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿರುವುದು ದೊಡ್ಡ ಮಟ್ಟದ ನಿರೀಕ್ಷೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಎರಡೂ ತಂಡಗಳ ಸಂಭಾವ್ಯ ಆಡುವ ಬಳಗಗಳು ಈ ಕೆಳಕಂಡಂತಿವೆ.
ನ್ಯೂಜಿಲೆಂಡ್ ಸಂಭಾವ್ಯ ಆಡುವ ಬಳಗ: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೀಫರ್ಟ್ ( ವಿಕೆಟ್ ಕೀಪರ್ ), ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ ಮತ್ತು ಟ್ರೆಂಟ್ ಬೌಲ್ಟ್
ಆಸ್ಟ್ರೇಲಿಯಾ ಸಂಭಾವ್ಯ ಆಡುವ ಬಳಗ: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಒಟ್ಟಾರೆ ಟಿಟ್ವೆಂಟಿ ಮುಖಾಮುಖಿಯಲ್ಲಿ ಯಾರು ಬಲಿಷ್ಠರು?
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 14 ಟಿ ಟ್ವೆಂಟಿ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯಗಳ ಪೈಕಿ ಆಸ್ಟ್ರೇಲಿಯಾ 9 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ನ್ಯೂಜಿಲೆಂಡ್ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಒಟ್ಟಾರೆ ಟಿ ಟ್ವೆಂಟಿ ಪಂದ್ಯಗಳ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾ ಸ್ಪಷ್ಟ ಮೇಲುಗೈ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications