
ನವದೆಹಲಿ: ಭಾರತದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದ್ದ ಟಿ20 ವಿಶ್ವಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಲ್ಲಿ ಅಕ್ಟೋಬರ್ 17ರಿಂದ ಆರಂಭಗೊಳ್ಳಲಿದೆ. ಫೈನಲ್ ಪಂದ್ಯ 14ಕ್ಕೆ ನಡೆಯಲಿದೆ. 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆದು ಕೆಲವೇ ದಿನಗಳ ಬಳಿಕ ಟಿ20 ವಿಶ್ವಕಪ್ ಶುರುವಾಗಲಿದೆ.
ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ 2021ರ ಕೆಲವು ಪಂದ್ಯಗಳು ಕೋವಿಡ್ ಕಾರಣ ನಡೆಸಿರಲಿಲ್ಲ. ಈ ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳುವ ಐಪಿಎಲ್, ಅಕ್ಟೋಬರ್ 15ರಂದು ಫೈನಲ್‌ನೊಂದಿಗೆ ಕೊನೆಗೊಳ್ಳುವ ನಿರೀಕ್ಷೆಯಿದೆ.
16 ತಂಡಗಳು ಪಾಲ್ಗೊಳ್ಳುವ ಟಿ20 ವಿಶ್ವಕಪ್, ಅಕ್ಟೋಬರ್ 17ರಂದು ಆರಂಭಗೊಂಡು ನವೆಂಬರ್ 14ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ ಎಂದು ಇಎಸ್‌ಪಿಎನ್‌ಕ್ರಿಕ್ ಇನ್ಫೋ ವರದಿ ಹೇಳಿದೆ. ಈ ಪ್ರತಿಷ್ಠಿತ ಟೂರ್ನಿ ಅಸಲಿಗೆ ಭಾರತದಲ್ಲೇ ನಡೆಯುವುದರಲ್ಲಿತ್ತು. ಆದರೆ ಕೋವಿಡ್-19 ದ್ವಿತೀಯ ಅಲೆಯ ಕಾರಣ ಟೂರ್ನಿ ಯುಎಇ ಮತ್ತು ಓಮನ್‌ಗೆ ಸ್ಥಳಾಂತರಗೊಂಡಿದೆ.
ಟಿ20 ವಿಶ್ವಕಪ್ ಪಂದ್ಯಕ್ಕೆ ತಾಣವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇನ್ನೂ ನಿಗದಿ ಪಡಿಸಿಲ್ಲ. ಆದರೆ ಎರಡು ಹಂತಗಳಲ್ಲಿ ಟೂರ್ನಿ ನಡೆಯಲಿದ್ದು, ಆರಂಭಿಕ ಹಂತ ಅಂದರೆ 12 ಪಂದ್ಯಗಳು ಯುಎಇಯಲ್ಲಿ, ಉಳಿದ ಪಂದ್ಯಗಳು ಓಮನ್‌ನಲ್ಲಿ ನಡೆಯಲಿವೆ ಎಂದು ಮೂಲ ತಿಳಿಸಿದೆ.